ರಾಮದುರ್ಗ: ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆಗೊಂಡರೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಉತ್ತಮ ರಸ್ತೆಗಳ ನಿರ್ಮಾಣದಿಂದ ಸುಗಮ ಸಂಚಾರವಾಗಲಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ತೋರಣಗಟ್ಟಿ-ಜೀವಾಪೂರ ೨.೮೦ ಕೋಟಿ ಹಾಗೂ ೧ ಕೋಟಿ ಅನುದಾನದಲ್ಲಿ ತೊಂಡಿಕಟ್ಟಿ- ಬುದ್ನಿಖುರ್ದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಆಯ್ದ ಭಾಗದ ರಸ್ತೆ ಅಗಲಿಕರಣ ಹಾಗೂ ರಸ್ತೆ ಸುಧಾರಣೆ ಸೇರಿದಂತೆ ೩.೮೦ ಕೋಟಿ ಅನುದಾನದ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು.
ಈಗಾಗಲೇ ತಾಲೂಕಿನ ಅನೇಕ ರಸ್ತೆಗಳ ಸುಧಾರಣೆಗಾಗಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಲಾಗುವದು. ಗ್ರಾಮಸ್ಥರ ಅನೇಕ ಬೇಡಿಕೆಗಳಿದ್ದು, ಅವುಗಳನ್ನು ಅವಶ್ಯಕವಾಗಿ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಪಾಡುವಲ್ಲಿ ಮುಂದಾಗಬೇಕು. ಕಾಮಗಾರಿ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಮುಖಂಡರಾದ ಶಿದ್ಲಿಂಗಪ್ಪ ಶಿಂಗಾರಗೊಪ್ಪ, ಶಿವಪ್ಪ ಮುನವಳ್ಳಿ, ರುದ್ರಪ್ಪ ಶಿಂಗಾರಗೊಪ್ಪ, ಬಸವರಾಜ ಐನಾಪೂರ, ರಾಮಣ್ಣ ಮೆಟಗುಡ್ಡ, ಕಲ್ಲಪ್ಪ ಹುಣಶಿಕಟ್ಟಿ, ಹೂವಪ್ಪ ಮಾಳಗಿ, ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ. ಎನ್, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಚಿಮ್ಮಲಗಿ, ತೋರಣಗಟ್ಟಿ ಗ್ರಾ.ಪಂ. ಆಡಳಿತಾಧಿಕಾರಿ ಪ್ರಕಾಶ ಮುಗಳಕೋಡ, ಗುತ್ತಿಗೆದಾರರಾದ ಮೈಲಾರಿ ಬಸಿಡೋಣಿ, ಬಿ.ಎಸ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.