ರಾಮದುರ್ಗ: ಇಲ್ಲಿನ ಲಯನ್ಸ್ ಕ್ಲಬ್ ಕಳೇದ ೫೪ ವರ್ಷಗಳಿಂದ ಸಾಮಾಜಿಕ ಸೇವೆ ಮತ್ತು ಆರೋಗ್ಯ ಸೇವೆಗಳನ್ನು ಮಾಡುತ್ತಾ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಸಾಧನೆಗಳನ್ನು ಮಾಡುತ್ತಾ ಇಂದು ಉತ್ತಮ ಶಿಕ್ಷಕರನ್ನು ಗುರ್ತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಸಂತಸ ತಂದಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದಲ್ಲಿ ಲಯನ್ಸ್ ಕ್ಲಬ್‌ದಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್‌ದಿಂದ ಸಾಕಷ್ಟು ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಅದಕ್ಕೆ ತಮ್ಮ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಶರಣ ಸಾಹಿತಿ ಸಿದ್ದಣ್ಣ ಲಂಗೋಟಿ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಪರಿಚಯ ಮಾಡುತ್ತ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತಾ ಇಂದಿನ ಶಿಕ್ಷಕರಿಗೆ ರಾಧಾಕೃಷ್ಣನ್ನವರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಬೆಂಬಳಗಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ಬಿ. ಕಬಾಡಗಿ, ಪ್ರೌಢಶಾಲಾ ಸಹ ಶಿಕ್ಷಕರಾದ ಅಶೋಕ ಹಕಾಟಿ, ಈರಣ್ಣ ಹರಗಣಿ, ಪ್ರಾಥಮಿಕ ಶಾಲಾ ಶಿಕ್ಷಕರಾದ ಮಹಾದೇವಿ ಯಂಡಿಗೇರಿ ಹಾಗು ಕಾಶಿನಾಥ ಗಡ್ಡೆನ್ನವರ ಇವರುಗಳಿಗೆ ರಾಮದುರ್ಗ ಲಯನ್ಸ್ ಕ್ಲಬ್ ವತಿಯಿಂದ ೨೦೨೬ ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ದಿಂಡವಾರ, ಬಿ.ಎಲ್. ಸಂಕನಗೌಡ್ರ, ಬಿ.ಪಿ. ಅರಳಿಮಟ್ಟಿ ಸೇರಿದಂತೆ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ್ ಕಂಬಾರ ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ್ ಜಾಯಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಎಸ್.ಎಂ. ಸಕ್ರಿ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ವೀಣಾ ಹಿರೇರಡ್ಡಿ ನಿರೂಪಿಸಿದರು. ವೈಶಾಲಿನಿ ಸಂಕನಗೌಡ್ರ ವಂದಿಸಿದರು.