ಬಳ್ಳಾರಿ:11: ಬಳ್ಳಾರಿಯಲ್ಲಿ ಇಂದು ನಮ್ಮ ಪಾದಯಾತ್ರೆ ಇಂದು ಮುಕ್ತಾಯವಾಗಿದೆ. ಆದರೆ ನಮ್ಮ ಹೋರಾಟ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೆ ಮುಂದುವರಿಯಲಿದೆ. ರಾಯಚೂರಿನಿಂದ ಬಳ್ಳಾರಿವರೆಗಿನ ನಮ್ಮ ಹೆಜ್ಜೆಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬಡಿದೆಬ್ಬಿಸಿ ಮುಂದಿನ ರಾಜಕೀಯ ಬದಲಾವಣೆ ಮುನ್ನುಡಿ ಬರೆಯಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಇಂದು ಮಾತನಾಡಿದ ಅವರು, ವಿಜಯೇಂದ್ರ ಅವರ ನೇತೃತ್ವದಲ್ಲಿ ಹತ್ತು ದಿನ ಪಾದಯಾತ್ರೆ ನಡೆದಿದೆ. ಈ ವೇಳೆ ಪಾದಯಾತ್ರೆಯ ದಾರಿಯುದ್ದಕ್ಕೂ ಜನ ಬೆಂಬಲ ನೀಡಿ, ಆಶೀರ್ವಾದ ಮಾಡಿದರು. ತಿಲಕ ಇಟ್ಟು ಆರತಿ ಬೆಳಗಿದರು. ಇದನ್ನು ನಾವು ಊಹಿಸಲು ಸಾಧ್ಯವಿಲ್ಲ ಎಂದರು.
ಮುಂದೆ ನಮ್ಮ ಬಿಜೆಪಿ ಸರ್ಕಾರ ತರುವವರೆಗೆ ನಮ್ಮ ಹೋರಾಟ ನಡೆಯಲಿದೆ. ಇದು ನಾವು ಮಾಡಿದ ಕೇವಲ ಪಾದಯಾತ್ರೆ ಅಲ್ಲ. ಜನರು ಬಯಸಿದ ಪರಿವರ್ತನೆಯ ಮುನ್ನುಡಿ. ಬಿಸಲ ಬೇಗೆಯನ್ನು ಎದುರಿಸಿ ಪಾದಯಾತ್ರೆ ನಡೆದಿದೆ. ನಾಡಿನ ಮತ್ತು ದೇಶದ ಗಮನ ಸೆಳೆದಿದೆ ಎಂದು ಹೇಳಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೆ ನಾವು ವಿಶ್ರಮಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನಡೆಸಿದ ಭ್ರμÁ್ಟಚಾರವನ್ನು ಬಯಲು ಮಾಡಿ ಬದಲಾವಣೆ ತರುತ್ತೇವೆ ಎಂದು ಸವಾಲು ಹಾಕಿದರು.
ಬಿಜೆಪಿ ಜಾರಿಗೆ ತಂದ ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ನಿಲ್ಲಿಸಿತು. ಕಿಸಾನ್ ಸಮ್ಮಾನ್ ನಿಧಿಯಲ್ಲಿ ಹಣ ಕಡಿಮೆ ಮಾಡಿದರು. ಭಾಗ್ಯಲಕ್ಷ್ಮಿ ಬಾಂಡ್ ನೀಡಲಿಲ್ಲ. ಬಡವರ ಹಣ ಹೊಡೆದು ಲೂಟಿ ಮಾಡಿದರು ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ ಕಾಂಗ್ರೆಸ್ ಮೇಲೇಳದಂತೆ ಕೆಲಸ ಮಾಡೋಣ ಎಂದ ಅವರು, ಪಾದಯಾತ್ರೆಗೆ ಉತ್ತಮ ಪ್ರಚಾರ ನೀಡಿದ ಮಾಧ್ಯಮಳಿಗೆ ಅಭಿನಂದನೆ ಸಲ್ಲಿಸಿದರು.