ತಾಳಿಕೋಟೆ, ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಮುದ್ದೇಬಿಹಾಳ-ತಾಳಿಕೋಟೆ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ನೀಡಲಾಗಿದೆ. ಮುದ್ದೇಬಿಹಾಳ-ತಾಳಿಕೋಟೆ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗುವ ಕುರಿತು ಮುಖ್ಯಮಂತ್ರಿಗಳು ನೂರಕ್ಕೆ ನೂರು ಭರವಸೆ ನೀಡಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಿಂದ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿ ಮುದ್ದೇಬಿಹಾಳ-ತಾಳಿಕೋಟೆ ತಾಲೂಕಿನ ಮಳೆ ಕೊರತೆ, ಕೃಷಿ ಪರಿಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾಗಿ ಮನವರಿಕೆ ಮಾಡಿಕೊಡಲಾಗಿದೆ. ಈಗಾಗಲೇ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಮುದ್ದೇಬಿಹಾಳ-ತಾಳಿಕೋಟೆ ತಾಲೂಕು ಸೇರ್ಪಡೆಯಾಗುವ ಸಾಧ್ಯತೆ ಇದ್ದರೂ, ತಾಲೂಕಿನ ವಾಸ್ತವ ಪರಿಸ್ಥಿತಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರದ ಮುಂದೆ ಒತ್ತಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಸಂಬಂಧಪಟ್ಟ ಆಯುಕ್ತರೊಂದಿಗೆ ಮಾತನಾಡಿದ್ದು, ತಕ್ಷಣವೇ ಪರಿಸ್ಥಿತಿಯ ಕುರಿತು ಪರಿಶೀಲಿಸಿ ವರದಿ ತರಿಸಿ ನೀಡುವಂತೆ ಸೂಚಿಸಿದ್ದಾರೆ ಎಂದು ಶಾಸಕ ನಾಡಗೌಡ ವಿವರಿಸಿದರು.
ರೈತರ ಹಿತದೃಷ್ಟಿಯಿಂದ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರಲಾಗಿದ್ದು, ಮುದ್ದೇಬಿಹಾಳ-ತಾಳಿಕೋಟೆ ತಾಲೂಕು ಬರಪೀಡಿತ ಪಟ್ಟಿಗೆ ಸೇರುತ್ತದೆ ಎಂಬ ಬಗ್ಗೆ ಯಾವುದೇ ಅನುಮಾನ ಬೇಡ. ರೈತರು ಗಾಬರಿಯಾಗುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ನೂರಕ್ಕೆ ನೂರು ಭರವಸೆ ನೀಡಿದ್ದಾರೆ. ಇನ್ನೂ ಸುಮಾರು ೫೦-೬೦ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದ್ದು, ಅದರಲ್ಲಿ ಮುದ್ದೇಬಿಹಾಳ-ತಾಳಿಕೋಟೆ ತಾಲೂಕು ಖಂಡಿತವಾಗಿ ಸೇರ್ಪಡೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುದ್ದೇಬಿಹಾಳ ಬಂದ್ ಮಾಡುವ ಅಗತ್ಯವಿಲ್ಲಾ
ಬರ ಘೋಷಣೆಗಾಗಿ ರೈತರು ಪ್ರತಿಭಟನೆ, ಮುಷ್ಕರ ಅಥವಾ ಬಂದ್‌ಗಳಂತಹ ಹೋರಾಟಗಳನ್ನು ನಡೆಸುವ ಅಗತ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವರದಿ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಮುದ್ದೇಬಿಹಾಳ ಬಂದ್ ಮಾಡುವದು ಅಗತ್ಯವಿಲ್ಲಾ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ
ತಾಲೂಕಿನಲ್ಲಿ ಕೆಲವರು ರೈತರ ಹೆಸರಿನಲ್ಲಿ ಹಸಿರು ಶಾಲು ಧರಿಸಿಕೊಂಡು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಷಡ್ಯಂತ್ರ ನಡೆಸುತ್ತಿದ್ದಾರೆ. ಇಂತಹವರ ಮಾತಿಗೆ ರೈತರು ಕಿವಿಗೊಡಬಾರದು ಎಂದು ನಾಡಗೌಡ ಹೇಳಿದರು.
ರೈತ ನಾಯಕ ಎಂಬ ಸ್ವಯಂಘೋಷಿತ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕೆಲವರು ತಮ್ಮ ವೈಯಕ್ತಿಕ ಸಂಕಷ್ಟಗಳಿಗೆ ರೈತರ ಹೆಸರನ್ನು ಬಳಸಿಕೊಂಡು ಪರಿಹಾರ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಈ ಹಿಂದೆ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ರೈತರ ಹಿತದ ಹೆಸರಿನಲ್ಲಿ ನಡೆಯುವ ರಾಜಕೀಯ ಹೋರಾಟಗಳನ್ನು ರೈತರು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಮುದ್ದೇಬಿಹಾಳದಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.