ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆನಂದ ನಗರ ಕುಷ್ಠರೋಗ ಆಸ್ಪತ್ರೆಯ ಎದುರಿಗೆ ಇರುವ ಶೆಡ್ ಬಳಿ 9 ಜನ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಮೀರಜ್ನ ಆಸ್ಪಕ್ ಮುಲ್ಲಾ, ತುಮಕೂರಿನ ಶಿವಕುಮಾರ್, ಹಳೇ ಹುಬ್ಬಳ್ಳಿಯ ಇಟ್ಬಾಲ್ ಅಹ್ಮದ್ ಮುದಗಲ್, ಆರೀಫ್ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹೃದರೆಹಾನ ಗೋಕಾಕ್, ಸಾಧೀಕ ಕಿತಾಬ್ ವಾಲೆ, ಮೆಹಬೂಬ್ ಸಾಬ್ ಮಕಂದಾರ ಬಂಧಿತರಾಗಿದ್ದಾರೆ.
ಬಂಧಿತರಿಂದ 1,25,000 ರೂಪಾಯಿ ಮೌಲ್ಯದ 1,500 ಗ್ರಾಂ ಗಾಂಜಾ, 60 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ 2 ಸಾವಿರ ರೂ. ನಗದು ಸೇರಿ, ಒಟ್ಟು 1,87,000 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.