ಧಾರವಾಡ: ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಎನ್ಎಸ್ಎಸ್ (N S S) ಘಟಕದ ವತಿಯಿಂದ ನವೆಂಬರ್ ೧, ೨೦೨೬ ರಂದು ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ‘ಕನ್ನಡ ನಾಡು-ನುಡಿ ಬೆಳೆದು ಬಂದ ದಾರಿ’ ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯುತ್ಸಾಹದಿಂದ ಜರುಗಿದವು.
ಕಾರ್ಯಕ್ರಮವನ್ನು ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲತಾ ಮುಳ್ಳೂರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ತಮ್ಮ ಮಧುರ ಗಾಯನದ ಮೂಲಕ ಸ್ವಯಂಸೇವಕರ ಮನ ಸೆಳೆದ ಅವರು, ಜಾನಪದ ಸಾಹಿತ್ಯದ ಅಸ್ತಿತ್ವವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ನಿರತರಾಗುವಂತೆ ಕರೆ ನೀಡಿದರು. ಇದೇ ವೇಳೆ ಶ್ರೀ ಶಿವಯೋಗಿಶ್ವರ ಪ್ರೌಢಶಾಲೆ, ಮೊರಬ ಶ್ರೀ ಸನಮನಿ ಚಂದ್ರಶೇಖರ್ ಅವರು ‘ಕನ್ನಡ ನಾಡು-ನುಡಿ ಹಾಗೂ ಅದರ ಹರಡುವಿಕೆ’ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿ.ಆರ್.ಪಿ ಶ್ರೀ ಶಿವಬಸವರಾಜ್ ಜ್ಯೋತಿ ಮಾತನಾಡಿ , ವಿದ್ಯಾರ್ಥಿಗಳು ದೈನಂದಿನ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸರಕಾರಿ ಪ್ರೌಢಶಾಲೆ ಗುಡಿಗೇರಿಯ ಕಲಾವಿದೆ ಹಾಗೂ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಎಚ್. ಅವರು ಆಕರ್ಷಕವಾಗಿ ಮಾತನಾಡಿದ್ದಲ್ಲದೆ, ತಮ್ಮ ಸುಮಧುರ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಅವರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾತೃಭಾಷೆಯನ್ನು ಗೌರವಿಸಸಬೇಕು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಂಕಲ್ಪ ಮಾಡಬೇಕು. ನಮ್ಮ ಭಾಷೆ ಕನ್ನಡ ನಮ್ಮೆಲ್ಲರ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಜ್ಯೋತಿ ಎಂ. ಹಾಗೂ ಭಾಗ್ಯಶ್ರೀ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯಾದ ಡಾ. ಬಾಪು ಮೊರಂಕರ್, ಶಿಬಿರದ ಸ್ವಯಂಸೇವಕರು, ಆಶ್ರಮವಾಸಿಗಳು, ಗುರುಹಿರಿಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.