ಕೊಪ್ಪಳ ಸೆಪ್ಟೆಂಬರ್ 10 : 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ-2026ರ ಉದ್ಘಾಟನಾ ಕಾರ್ಯಕ್ರಮವು ಬುಧವಾರ (ಸೆ. 9ರಂದು) ತಾಲೂಕು ಪಂಚಾಯಿತಿ ಕೃಷಿ ವಿಸ್ತಾರಣಾ ಕೇಂದ್ರದಲ್ಲಿ ನಡೆಯಿತು.
9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ, ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿದ್ದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ಪೋಷಣ್ ಮಾಸಾಚರಣೆ ಕೇವಲ ಒಂದು ತಿಂಗಳಿಗೆ ಸೀಮಿತವಾಗದೆ, ಪ್ರತಿನಿತ್ಯದ ಆಹಾರ ಪದ್ಧತಿಯ ಭಾಗವಾಗಬೇಕು ಎಂದು ಹೇಳಿದರು.
ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೋಟಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಪೌಷ್ಟಿಕತೆಯು ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹದಿಹರೆಯದವರ ಆರೋಗ್ಯ, ಬೆಳವಣಿಗೆ ಮತ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಸವಾಲಾಗಿದೆ. ಇದನ್ನು ಎದುರಿಸುವ ಉದ್ದೇಶದಿಂದ ಭಾರತ ಸರ್ಕಾರವು 2018ರಲ್ಲಿ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ್ ಮಾಸಾಚರಣೆ ಮೂಲಕ ಪೋಷಣೆ, ಆರೋಗ್ಯ ಮತ್ತು ರಕ್ಷಣೆಯ ಕುರಿತು ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್ ಅವರು ಮಾತನಾಡಿ, ಅಪೌಷ್ಟಿಕತೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಪೋಷಣ್ ಮಾಸಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಆಹಾರದ ವೈವಿಧ್ಯತೆ, ಸಮತೋಲನ ಪೋಷಕಾಂಶ, ಅಂಗನವಾಡಿ ಕೇಂದ್ರಗಳಲ್ಲಿ ಬೇಯಿಸಿದ ಊಟ, ಸಮುದಾಯದ ಒಡೆತನ ಮತ್ತು ಹೊಣೆಗಾರಿಕೆ, ಮಕ್ಕಳ ಬೆಳವಣಿಗೆಗೆ ಪೋಷಕಾಂಶ ಹಾಗೂ ಆರಂಭಿಕ ಉತ್ತೇಜನ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ತಾಯಂದಿರ ಆರೋಗ್ಯಕ್ಕಾಗಿ ನೇರ ನಗದು ವರ್ಗಾವಣೆ ಸೇರಿದಂತೆ ಪ್ರಮುಖ ಅಂಶಗಳ ಕುರಿತು ವಿವರಿಸಿದರು.
ವಿವಿಧ ಕಾರ್ಯಕ್ರಮ: “ನಮ್ಮ ಅಂಗನವಾಡಿ ನಮ್ಮದೇ ಜವಾಬ್ದಾರಿ” ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಪೋಷಣ್ ಮಾಸಾಚರಣೆ ಆರಂಭಿಸಲಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳ ಅನ್ನಪ್ರಾಶನ ಹಾಗೂ ಸೀಮಂತ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ವೆಚ್ಚದ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು, ಬೀಜಗಳು, ಸೊಪ್ಪು, ಹಾಲು ಮತ್ತು ಮೊಟ್ಟೆಗಳನ್ನು ಬಳಸಿ ತಯಾರಿಸಿದ ಪೌಷ್ಟಿಕ ಆಹಾರಗಳ ನೇರ ಪ್ರಾತ್ಯಕ್ಷಿಕೆ ನಡೆಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೂಪಾ ಗಂಧದ, ಲಕ್ಷ್ಮೀ ಭಾಗೇವಾಡಿ, ಹಿರಿಯ ಹಾಗೂ ಕಿರಿಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳು ಮತ್ತು ಪೋಷಣ್ ಸಿಬ್ಬಂದಿ ಭಾಗವಹಿಸಿದ್ದರು. ಪ್ರೀತಿ ಕೋರೆ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು.