2020ರಲ್ಲಿ 26 ಎಕರೆ ಅರಣ್ಯ ಬಳಕೆಗೆ ವಿಶ್ವೇಶ್ವರ ಜಲ ನಿಗಮವು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಹ 2024ರ ಜುಲೈನಲ್ಲಿ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಸ್ಪಷ್ಟನೆ ಹಾಗೂ ಹೆಚ್ಚುವರಿ ಮಾಹಿತಿ ಒದಗಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಸಚಿವಾಲಯ ಸೂಚಿಸಿದೆ.
ಪರ-ವಿರೋಧಗಳ ಮಧ್ಯ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದ್ದರು. ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಯೋಜನೆ ಉದ್ಘಾಟನೆ ಮಾಡಲಾಗಿತ್ತು. ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿಎಂ, ದೊಡ್ಡನಾಗರದ 9ನೇ ಪಂಪ್ ಹೌಸ್ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದ್ದರು. ಇನ್ನು ಉದ್ಘಾಟನೆಗೂ ಒಂದು ದಿನ ಮೊದಲೇ ಅಂದರೆ ಸೆ. 05ರಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಹೋಗಿ ಪೂಜೆ- ಹೋಮ ಹವನಗಳನ್ನು ಮಾಡಿದ್ದರು.