ಸದ್ಯ ಕೆಎಂಎಫ್ ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಗಿಕವಾಗಿ ದೋಸೆ ಹಿಟ್ಟಿನ ಮಾರಾಟ ಆರಂಭಿಸಿದೆ. ಇದೀಗ ರಾಜಧಾನಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದ್ದಂತೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ದೋಸೆ-ಇಡ್ಲಿ ಹಿಟ್ಟಿನ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಇತ್ತ ನಂದಿನಿ ಪರಿಚಯಿಸಿರುವ ದೋಸೆ ಹಿಟ್ಟಿನಲ್ಲಿ ವೇ ಪ್ರೊಟೀನ್ ಕೂಡ ಇರುವುದರಿಂದ ಸದ್ಯ ಜಿಮ್, ಡಯಟ್ ಬಗ್ಗೆ ಗಮನಹರಿಸುವವರು ಕೂಡ ನಂದಿನಿ ಹಿಟ್ಟಿನ ಮೊರೆಹೋಗುತ್ತಿದ್ದಾರೆ. ಮುಂದಿನ ಒಂದು ವಾರದೊಳಗಾಗಿ ಇತರೆ ಜಿಲ್ಲೆಗಳಲ್ಲೂ ದೋಸೆ, ಇಡ್ಲಿ ಹಿಟ್ಟು ಮಾರಾಟ ಆರಂಭಿಸುವುದಾಗಿ ಕೆಎಂಎಫ್ ಸುಳಿವು ನೀಡಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.
ಸದ್ಯ ಬೆಂಗಳೂರಲ್ಲಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂಗೆ 80 ರೂಪಾಯಿ ದರ ನಿಗದಿಪಡಿಸಿರುವ ಕೆಎಂಎಫ್, ಇದೇ ಪ್ರಥಮಬಾರಿಗೆ ದೋಸೆ ಹಿಟ್ಟಿಗೆ ಶೇಕಡ 5 ರಷ್ಟು ವೇ ಪ್ರೊಟೀನ್ ಸೇರಿಸಿ ಜನರಿಗೆ ನೀಡುತ್ತಿದೆ. ಇದರಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ.