Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ವಿಧಿವಶ

ಬೀದರ್ ಭಾಗ್ಯವಿಧಾತ ಭೀಮಣ್ಣ ಖಂಡ್ರೆ ಇನ್ನಿಲ್ಲ
ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ವಿಧಿವಶ
ಬೀದರ್, ಜ. 16:ಕಲ್ಯಾಣ ಕರ್ನಾಟಕದ ಧೀಮಂತ ನಾಯಕ, ಸಹಕಾರಿ ಧುರೀಣ, ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಸಾರಿಗೆ ಸಚಿವ, ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ಅವರು ಶುಕ್ರವಾರ ರಾತ್ರಿ 10.50ರ ಸುಮಾರಿನಲ್ಲಿ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಕಳೆದ 10-12 ದಿನಗಳಿಂದ ವಯೋಸಹಜವಾದ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಭಾಲ್ಕಿಯ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು, ಇಂದು ರಾತ್ರಿ ಅವರ ಆತ್ಮ ದೇಹವನ್ನು ತ್ಯಜಿಸಿತು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.


ಕಳೆದ ಒಂದು ವಾರದಿಂದ ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು, ಹರಚರ ಗುರುಮೂರ್ತಿಗಳು, ಸಚಿವರು, ಶಾಸಕರು, ಸಮಾಜದ ಗಣ್ಯರು, ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಲ್ಕಿಗೆ ಆಗಮಿಸಿ ಭೀಮಣ್ಣ ಖಂಡ್ರೆ ಅವರನ್ನು ನೋಡಿ, ಆರೋಗ್ಯ ವಿಚಾರಿಸಿದ್ದರು. ಹಲವರು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಭೀಮಣ್ಣ ಖಂಡ್ರೆ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು.
103 ವರ್ಷಗಳ ಸಾರ್ಥಕ ಹಾಗೂ ತುಂಬು ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಇಂದು ಎಲ್ಲರನ್ನೂ ಅಗಲಿದ್ದಾರೆ. ಅವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮತ್ತು ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಕುಮಾರ ಖಂಡ್ರೆ ಸೇರಿ ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಇವರ ಮತ್ತೊಬ್ಬ ಪುತ್ರ ಮಾಜಿ ಶಾಸಕ ಡಾ. ವಿಜಯಕುಮಾರ್ ಖಂಡ್ರೆ 2019ರಲ್ಲಿ ನಿಧನಹೊಂದಿದ್ದರು.
ಭೀಮಣ್ಣ ಖಂಡ್ರೆ ಅವರು ವೃತ್ತಿಯಲ್ಲಿ ವಕೀಲರಾಗಿ ಬಡಜನರಿಗೆ ರೈತರಿಗೆ ನ್ಯಾಯ ಕೊಡಿಸುವ ಮೂಲಕ ಜನನಾಯಕರಾಗಿ ಹೊರಹೊಮ್ಮಿ, 1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ್ದರು.
1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನಪರಿಷತ್ ಸದಸ್ಯರಾಗಿ, ಎಂ.ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
1976ರಲ್ಲಿ ಕೆಲವು ಅಧಿಕಾರಿಗಳು ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮದಡಿ ಬಲವಂತದಿಂದ ಯುವಜನರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದುದನ್ನು ಖಂಡಿಸಿ, ತಾವೇ ಜನರ ಮನವೊಲಿಸಿ ಒಂದೇ ದಿನದಲ್ಲಿ 2500ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಮನವೊಲಿಸಿ ಒಂದೇ ದಿನ ಒಂದೇ ನಗರದಲ್ಲಿ ನಡೆದ ಅತಿ ಹೆಚ್ಚು ಸಂತಾನ ಹರಣ ಶಸ್ತ್ರಚಿಕಿತ್ಸೆಯ ದಾಖಲೆ ಸೃಷ್ಟಿಸಿದ್ದರು. ಅಂದು ಬಿಬಿಸಿಯಲ್ಲಿ ಈ ಸುದ್ದಿ ಪ್ರಸಾರವಾಗಿತ್ತು.
ಸಹಕಾರಿ ಧುರೀಣರಾಗಿ ಮತ್ತು ರೈತರ ಕಲ್ಯಾಣದ ಬಗ್ಗೆ ಕಳಕಳಿ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ಹಳ್ಳಿಖೇಡದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯ ಮಹಾತ್ಮಾ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಭೀಮಣ್ಣ ಖಂಡ್ರೆ ಅವರು, ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾತಂತ್ರ್ಯ ಸೇನಾನಿಯಾಗಿ, ಹೈದ್ರಾಬಾದ್ ವಿಮೋಚನೆಯ ಹೋರಾಟಗಾರರಾಗಿ ರಜಾಕಾರರ ದೌರ್ಜನ್ಯ ಪ್ರತಿಭಟಿಸಿದ್ದ ಅವರು, ಏಕೀಕರಣದ ಸಂದರ್ಭದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲಿಯೇ ಉಳಿಸಲು ಶ್ರಮಿಸಿದ್ದರು. ಅವರ ತಮ್ಮ ಈ ಕೊಡುಗೆಗಾಗಿ ಸುವರ್ಣ ಏಕೀಕರಣ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು.
ಶಿಕ್ಷಣತಜ್ಞ:
ಶಾಂತಿವರ್ಧಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಜಿಲ್ಲೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಲು ಬೀದರ್ ನಲ್ಲಿ ಅಕ್ಕಮಹಾದೇವಿ ಕಾಲೇಜು, ಭಾಲ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಸಾವಿರಾರು ಯುವಜನರ ಭವಿಷ್ಯ ರೂಪಿಸಿದ್ದರು. ತಮ್ಮ ಸ್ವಕ್ಷೇತ್ರ ಭಾಲ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಸಲುವಾಗಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು.
ತಮ್ಮ ದೀಕ್ಷಾ ಗುರು ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಆಣತಿಯಂತೆ ಬಸವಕಲ್ಯಾಣದಲ್ಲಿ ಈಗಿರುವ ಶಿವಲಿಂಗಾಕಾರದ ಅನುಭವ ಮಂಟಪ ನಿರ್ಮಾಣಕ್ಕೆ ತನು,ಮನ, ಧನ ಅರ್ಪಿಸಿದ ಅವರು, ಸ್ವಯಂ ತಲೆಯ ಮೇಲೆ ಮರಳು, ಜಲ್ಲಿಯ ಕಾಂಕ್ರೀಟ್ ಹೊತ್ತು ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಿದ್ದರು.
ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ಅವರು ಕೆಲವೇ ಸಾವಿರ ಇದ್ದ ಸಭಾದ ಸದಸ್ಯತ್ವವನ್ನು ಲಕ್ಷಕ್ಕೆ ತೆಗೆದುಕೊಂಡು ಹೋಗುವ ಮೂಲಕ ತಮ್ಮ ಸಂಘಟನಾ ಸಾಮರ್ಥ್ಯ ಪ್ರದರ್ಶಿಸಿದ್ದರು.
ಶಾಲಾ ಕಾಲೇಜು ದಾಖಲೆಗಳ ಪ್ರಕಾರ ಭೀಮಣ್ಣ ಖಂಡ್ರೆ ಅವರ ಜನ್ಮ ದಿನಾಂಕ 1927 ಜನವರಿ ಆದರೂ, ಭೀಮಣ್ಣ ಖಂಡ್ರೆ ಅವರೇ ಹೇಳುತ್ತಿದ್ದಂತೆ ಅವರು ಹುಟ್ಟಿದ್ದು 1923ರ ಜನವರಿ 8ರಂದು. ಮೊನ್ನೆಯಷ್ಟೇ ಅವರು 102 ವರ್ಷ ಪೂರೈಸಿದ್ದರು.
ಶತಾಯುಷಿ ಲೋಕನಾಯಕ:
ಬಾಲ್ಯದಲ್ಲಿ ತೀವ್ರ ಅನಾರೋಗ್ಯಪೀಡಿತರಾದಾಗ ಮುಚಳಂಬದ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳಿಂದ ಯೋಗ ಕಲಿತು ನಿತ್ಯ ಯೋಗ, ಪ್ರಾಣಾಯಾಮ ಹಾಗೂ ಇಷ್ಟಲಿಂಗ ಪೂಜೆ ಮಾಡುತ್ತಾ, ಶುದ್ಧ ಸಸ್ಯಾಹಾರವನ್ನಷ್ಟೇ ಸ್ವೀಕರಿಸುತ್ತಿರುವುದೇ ತಮ್ಮ ಶತಾಯುಷ್ಯದ ಗುಟ್ಟು ಎಂದು ಹೇಳುತ್ತಿದ್ದ ಭೀಮಣ್ಣಖಂಡ್ರೆ ಅವರು ಭಾಲ್ಕಿ ಹಿರೇಮಠದ ಡಾ. ಚನ್ನಬಸವ ಪಟ್ಟದ್ದೇವರ ಪರಮ ಭಕ್ತರಾಗಿದ್ದರು. ಭೀಮಣ್ಣ ಖಂಡ್ರೆ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಪಟ್ಟದ್ದೇವರು ಭೀಮಣ್ಣ ಅವರಿಗೆ ಲೋಕನಾಯಕ ಎಂಬ ಬಿರುದು ನೀಡಿದ್ದರು.

 

ಇಂದು ಅಂತಿಮ ದರ್ಶನ- ಸಂಜೆ ಅಂತ್ಯಕ್ರಿಯೆ:

ಶನಿವಾರ ಬೆಳಗ್ಗೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಸಂಜೆ ಭಾಲ್ಕಿಯ ಚಿಕಲ್ ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿ ಲಿಂಗೈಕ್ಯ ಲಕ್ಷ್ಮೀಬಾಯಿ ಅವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್ಸಮಾಜದ ಮುಖ್ಯ ವಾಹಿನಿಗೆ ವಿಕಲ ಚೇತನರು ಮುಂದೆ ಬರಬೇಕು : ಬಾಲಚಂದ್ರ ಜಾರಕಿಹೊಳಿಶ್ರೀ ಸಾಯಿ ಕಾಲೇಜಿನ ಶಿಬಿರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ವಿಧಾನ ಪರಿಷತ್ ಸದಸ್ಯ  ಸ್ಥಾನಕ್ಕೆ ಐದನೇ ಬಾರಿ ಆಯ್ಕೆಯಾದ ಶಶೀಲ್. ಜಿ. ನಮೋಶಿ ಅವರಿಗೆ ಹೊಸಪೇಟೆ ಯಲ್ಲಿ ಅದ್ಧೂರಿ ಸ್ವಾಗತ*ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ*ಮಹಿಳಾ ಸಾಹಿತಿಗಳ ನಿರ್ಲಕ್ಷ್ಯ ಖಂಡನೀಯ-ಡಾ.ಸುಜಾತಾ ಚಲವಾದಿವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ತಂಡಕ್ಕೆ ತನ್ವೀರ್ ಆಯ್ಕೆಶ್ರೀ ವಿಶ್ವಗುರು ಸೌಹಾರ್ದ ಸೊಸೈಟಿ  ಅಧ್ಯಕ್ಷರಾಗಿ ಅರವಿಂದ ಬಡಕುಂದ್ರಿ, ಉಪಾಧ್ಯಕ್ಷರಾಗಿ ಬರಮಪ್ಪ ನಾಗನೂರ ಆಯ್ಕೆ.ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ: 95 ರೈತರಿಗೆ ₹54 ಕೋಟಿ ರೂ. ವಿತರಣೆ