ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ʼ1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ ಆರೋಪವಿದೆʼ ಎಂದು ಉಲ್ಲೇಖಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮಂಗಳವಾರ ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಿಶಂಕರ್ ಅಯ್ಯರ್ ನೀಡಿದ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗುತ್ತಿದ್ದಂತೆ ಕಾಂಗ್ರೆಸ್ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಲು ಮುಂದಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಬಗ್ಗೆ ಮಾತನಾಡಿ, ಮಣಿಶಂಕರ್ ಅಯ್ಯರ್ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ʼʼಮಣಿಶಂಕರ್ ಅಯ್ಯರ್ ಅವರು ʼಆಕ್ರಮಣದ ಆರೋಪʼ ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ ಮತ್ತು ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲʼʼ ಎಂದು ಹೇಳಿದ್ದಾರೆ.