ಬಳ್ಳಾರಿ: 04:.ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಗರದ 17ನೇ ವಾರ್ಡ್‌ನ ಬಿ.ಗೋನಾಳ್ ನಿವಾಸಿ ಎಂ.ತಿಮ್ಮಪ್ಪ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘ (ರಿ.), ಬೆಂಗಳೂರು ರಾಜ್ಯ ಸಮಿತಿಯು ಆಗಸ್ಟ್ 31ರಂದು ನೇಮಕಾತಿ ಆದೇಶ ಹೊರಡಿಸಿದ್ದು, ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಸಂಘಟನೆಯ ಚಟುವಟಿಕೆಗಳನ್ನು ಮುನ್ನಡೆಸುವಂತೆ ಸೂಚಿಸಿದೆ.
ಕುರುಬ ಸಮಾಜದ ಸಂಘಟನೆ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವುದು, ಸಮಾಜದ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವುದು ಸೇರಿದಂತೆ ಹಲವು ಜವಾಬ್ದಾರಿಗಳು ನೂತನ ಅಧ್ಯಕ್ಷರ ಮೇಲಿದೆ.
ಸಂಘಟನೆಗೆ ಆದ್ಯತೆ
ಜಿಲ್ಲೆಯಲ್ಲಿ ಕುರುಬ ಸಮಾಜದ ಜನರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುವುದು, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವುದು ನೂತನ ಅಧ್ಯಕ್ಷರ ಪ್ರಮುಖ ಆದ್ಯತೆಗಳಾಗಿವೆ.
ಈ ಕುರಿತು ಮಾತನಾಡಿದ ಎಂ.ತಿಮ್ಮಪ್ಪ, “ರಾಜ್ಯ ಸಮಿತಿಯು ನನ್ನ ಮೇಲೆ ವಿಶ್ವಾಸವಿಟ್ಟು ಬಳ್ಳಾರಿ ಜಿಲ್ಲಾಧ್ಯಕ್ಷರ ಜವಾಬ್ದಾರಿ ನೀಡಿದೆ. ಇದು ನನಗೆ ದೊರೆತ ಗೌರವಕ್ಕಿಂತಲೂ ದೊಡ್ಡ ಜವಾಬ್ದಾರಿಯಾಗಿದೆ. ಜಿಲ್ಲೆಯ ಕುರುಬ ಸಮಾಜದ ಎಲ್ಲರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದರು.
“ಸಮುದಾಯದ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳ ಕುರಿತು ಅರಿವು ಮೂಡಿಸುವುದು, ಸಮಾಜದ ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳುವುದು ಹಾಗೂ ಸಮಾಜದ ನ್ಯಾಯಯುತ ಬೇಡಿಕೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವ ಕೆಲಸ ಮಾಡಲಾಗುವುದು. ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿಯೂ ಸಂಘಟನೆಯನ್ನು ವಿಸ್ತರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ” ಎಂದು ಅವರು ತಿಳಿಸಿದರು.
ಸಮಾಜದ ಸಮಸ್ಯೆಗಳ ಕುರಿತು ಪಕ್ಷಾತೀತವಾಗಿ ಧ್ವನಿ ಎತ್ತುವುದರ ಜತೆಗೆ, ಜಿಲ್ಲೆಯಲ್ಲಿ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘದ ರಾಜ್ಯಾಧ್ಯಕ್ಷ ಪ್ರಭುರಂಗ ದೊಡ್ಡೇರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಅವರು ನಿಡಿದ ಜವಾಬ್ದಾರಿಯನ್ನು ಅವರ ಮಾರ್ಗದರ್ಶನ ಮುನ್ನಡೆಸಿಕೊಂಡು ಹೋಗುವೆ ಎಂದರು