ಕಾಗವಾಡ: ಮತಕ್ಷೇತ್ರದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದರೂ ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದು, ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಐನಾಪುರ ಮತ್ತು ಖಿಳೇಗಾವ, ಬಸವೇಶ್ವರ ಯಾತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ
ಅವರು ಶುಕ್ರವಾರ ದಿ.10 ರಂದು ತಾಲೂಕಿನ ಐನಾಪುರ ಪಟ್ಟಣದಲ್ಲಿ ಐನಾಪುರ ಯಾತ್ ನೀರಾವರಿ ಬಸವೇಶ್ವರ ಯಾತ ನೀರಾವರಿ ಕಾಲುವೆಗಳಿಗೆ ನೀರು ಹರಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕವಲಗುಡ್ಡ ಹನುಮಾಪುರ ಪರಮಪೂಜ್ಯ ಅಮರೇಶ್ವರ ಮಹಾರಾಜರು ವಹಿಸಿ, ಮಾತನಾಡುತ್ತಾ ಶಾಸಕ ರಾಜು ಕಾಗೆ ಅವರು ತಮ್ಮ ಆರೋಗ್ಯದ ಸಮಸ್ಯೆಯನ್ನು ಲೆಕ್ಕಿಸದೆ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಲುವೆಗಳಿಗೆ ನೀರು ಹರಿಸಲು ಆಗಮಿಸಿರುವುದು ಕ್ಷೇತ್ರದ ಮೇಲಿರುವ ಅವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು. ಮುಖಂಡರಾದ ವಿನಾಯಕ ಬಾಗಡಿ, ಸೇರಿದಂತೆ ಅನೇಕರು ಮಾತನಾಡಿದರು.
ಈ ವೇಳೆ ಮುಖಂಡರಾದ ಸಂಜಯ ತಳವಳಕರ, ಶಂಕರ ವಾಘಮೋಡೆ, ವಿನಾಯಕ ಬಾಗಡಿ, ಶಿವಾನಂದ ಗೋಲಬಾವಿ, ರವಿ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ವಸಂತ ಖೋತ, ರವೀಂದ್ರ ಪೂಜಾರಿ, ವಿನಾಯಕ ಕಾಂಬಳೆ, ನೀರಾವರಿ ಇಲಾಖೆ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಮುತ್ತು ಕೊಕಟನೂರ, ವಿಠ್ಠಲ ಕೊಕಟನೂರ, ಗಾಯತ್ರಿ ಕನ್ಸ್ಟ್ರಕ್ಷನ್ ನ ಕೆ.ನಾಗೇಶ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
