ಬಳ್ಳಾರಿ, ಜು.10: : ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಗುತ್ತಿಗೆ ಕಾರ್ಮಿಕನೊಬ್ಬ ಕಂಬದ ಮೇಲೆಯೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಸಂಗನಕಲ್ಲು ಗ್ರಾಮದ ಬಳಿ ಯರಗುಡಿ ಗ್ರಾಮದ ನಿವಾಸಿ ಹುಲಗಪ್ಪ (22) ಎಂಬ ಯುವಕ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹುಲಗಪ್ಪನನ್ನು ಸಂಗನಕಲ್ಲು ಗ್ರಾಮದ ಧ್ಯಾನ ಮಂದಿರದ ಸಮೀಪ ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕಾಗಿ ಕಂಬ ಏರಿಸಲಾಗಿತ್ತು.
ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ತಂತಿಯಲ್ಲಿ ವಿದ್ಯುತ್ ಹರಿದು ತೀವ್ರ ವಿದ್ಯುತ್ ಆಘಾತಕ್ಕೊಳಗಾದ ಹುಲಗಪ್ಪ ಕಂಬದ ಮೇಲೆಯೇ ಸಿಲುಕಿಕೊಂಡಿದ್ದಾನೆ. ಸುಮಾರು 15 ನಿಮಿಷಗಳ ಕಾಲ ಜೀವ ಉಳಿಸಿಕೊಳ್ಳಲು ಸಹಾಯಕ್ಕಾಗಿ ಕಿರುಚಾಡಿದರೂ, ಸ್ಥಳದಲ್ಲಿದ್ದವರು ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಗತ್ಯ ಸುರಕ್ಷತಾ ವ್ಯವಸ್ಥೆಗಳ ಕೊರತೆಯಿಂದ ಆತ ಕಂಬದ ಮೇಲೆಯೇ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಜೆಸ್ಕಾಂ ಅಧಿಕಾರಿಗಳು ಹಾಗೂ ಲೇಬರ್ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಲೈನ್ ದುರಸ್ತಿಗೆ ಮುನ್ನ ಕಡ್ಡಾಯವಾಗಿ ಪಡೆಯಬೇಕಾದ ಲೈನ್ ಕ್ಲಿಯರೆನ್ಸ್ (ಎಲ್‌ಸಿ) ಪಡೆಯದೇ ಕೆಲಸ ಆರಂಭಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಸ್ಥಳದಲ್ಲಿ ಜವಾಬ್ದಾರಿಯುತ ತಾಂತ್ರಿಕ ಸಿಬ್ಬಂದಿ ಅಥವಾ ಲೈನ್‌ಮ್ಯಾನ್ ಇರಲಿಲ್ಲ ಎನ್ನಲಾಗಿದೆ.
ಘಟನೆಯ ಬಳಿಕ ಮೃತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದ ಆಧಾರವಾಗಿದ್ದ ಯುವಕನ ಅಕಾಲಿಕ ಸಾವಿನಿಂದ ಹುಲುಗಪ್ಪನ ಕುಟುಂಬಕ್ಕೆ ಗರಬಡಿದಂತಾಗಿದೆ.
ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
