ಘಟನೆಯ ಹೃದಯ ವಿದ್ರಾವಕ ದೃಶ್ಯ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಹುಲ್ಲುಹಾಸಿನ ಮೇಲೆ ಉದ್ದಕ್ಕೂ ಮೃತದೇಹಗಳು ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಾಳಿಯ ಪ್ರತ್ಯಕ್ಷದರ್ಶಿಗಳು ಭಯೋತ್ಪಾದಕರು ಪ್ರವಾಸಿಗರನ್ನು ಹಿಂದೂಗಳೆಂದು ಕನ್ಫರ್ಮ್ ಮಾಡಿಕೊಂಡ ಬಳಿಕವೇ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ದಾಳಿ ಧಾರ್ಮಿಕ ಪ್ರೇರಿತವಾಗಿದೆ ಎಂದಿದ್ದಾರೆ.
ವೈರಲ್ ಆದ ಫೋಟೊವೊಂದರಲ್ಲಿ ನವವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ಶವದ ಬಳಿ ಅಸಹಾಯಕಳಾಗಿ ಕುಳಿತಿರುವುದನ್ನು ಕಾಣಬಹುದು. ಆ ಮಹಿಳೆ ಇತ್ತೀಚೆಗಷ್ಟೇ ವಿವಾಹವಾಗಿದ್ದರು, ಹನಿಮೂನ್ಗೆಂದು ಕಾಶ್ಮೀರಕ್ಕೆ ಬಂದಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಸ್ಥಳೀಯ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ನಿರ್ಣಯಿಸುವಂತೆ ನಿರ್ದೇಶಿಸಿದ್ದಾರೆ.
2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಪುಣೆಯ ಉದ್ಯಮಿ ಸಂತೋಷ್ ಜಗದಾಳೆ ಅವರ ಮಗಳು ಮಾತನಾಡಿ, ಭಯೋತ್ಪಾದಕರು ತಂದೆಯ ಬಳಿ ಇಸ್ಲಾಮಿಕ್ ಪಠಣ ಮಾಡಲು ಕೇಳಿಕೊಂಡರು. ಅದು ಸಾಧ್ಯವಾಗದಿದ್ದಾಗ, ಅವರು ಒಮ್ಮೆ ತಲೆಗೆ, ನಂತರ ಕಿವಿಯ ಹಿಂದೆ ಮತ್ತು ನಂತರ ಬೆನ್ನಿಗೆ ಗುಂಡು ಹಾರಿಸಿದರು.