ಬಳ್ಳಾರಿ, ನ.09:..ಪಿಂಜಾರ್/ನದಾಫ್ ಸಮಾಜವನ್ನು ಪ್ರತಿನಿಧಿಸಿ ರಾಜಕೀಯ ಪ್ರತಿನಿಧಿಗಳು ಇಲ್ಲ ಎಂದು ಕೊರಗಬೇಡಿ, ನಾನೇ ನಿಮ್ಮ ಸಮಾಜದ ಪ್ರತಿನಿಧಿ ಎಂದು ಭಾವಿಸಿ, ನಾನು ನಿಮ್ಮ ಜೊತೆಗಿರುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ರವಿವಾರ ಕರ್ನಾಟಕ ರಾಜ್ಯ ಪಿಂಜಾರ್/ನದಾಫ್ ಸಂಘದ 34ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಿಂಜಾರ್/ನದಾಫ್ ಸಮಾಜದ ಜೊತೆಗೆ ನನ್ನ ಬಾಂಧವ್ಯ ತುಂಬ ಹಳೆಯದು, ನಾನು ಶಾಸಕನಾಗುತ್ತೇನೆ ಎಂದು ದಿ.ಹಿರೇಹಾಳ್ ಇಬ್ರಾಹಿಂಸಾಬರು ತುಂಬ ಹಿಂದೆಯೇ ನನ್ನ ತಂದೆಗೆ ಹೇಳಿದ್ದರು, ನನ್ನನ್ನು ಮೊಮ್ಮಗ ಎಂದು ಪ್ರೀತಿಯಿಂದ ಕರೆಯುತ್ತಿದ್ದರು, ಹೀಗಾಗಿ ನಾನು ನಿಮ್ಮ ಸಮಾಜದ ಮೊಮ್ಮಗ ಇದ್ದಂತೆ, ನಿಮ್ಮ ಸಮಾಜದಲ್ಲಿ ಶಾಸಕರು ಸಂಸದರು ಇಲ್ಲ ಎಂದು ಕೊರಗಬೇಡಿ, ನಾನೇ ನಿಮ್ಮ ಸಮಾಜದ ಶಾಸಕ ಅಂತ ಭಾವಿಸಿ ಎಂದು ಹೇಳಿದರು.
ಪಿಂಜಾರ್ ನದಾಫ್ ಸಮಾಜದ ಹಿರಿಯರನ್ನು ಸ್ಮರಿಸಿದ ಅವರು ಸಮಾಜದೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು. ಸಂಘದ ಚಟುವಟಿಕೆಗಳಿಗಾಗಿ 10 ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್, ಶಾಸಕಿ ಅನ್ನಪೂರ್ಣಾ ತುಕಾರಾಂ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ನಗರದ ಖಾಜಿ ಗುಲಾಂ ಮೊಹಮ್ಮದ್ ಸಿದ್ದಿಕಿ, ಪಿಂಜಾರ್ ನದಾಫ್ ಸಮಾಜದ
ರಾಜ್ಯ ಮುಖಂಡರಾದ ಜಲೀಲಸಾಬ, ವಿಭಾಗ ಅಧ್ಯಕ್ಷ ಶಾಸಾಬ್, ಜಿಲ್ಲಾಧ್ಯಕ್ಷ ಮೌಲಾಲಿ, ನಗರಾಧ್ಯಕ್ಷ ನಬಿಸಾಬ, ಮೇಯರ್ ಗಾದೆಪ್ಪ, ಅಲ್ಲಂ ಪ್ರಶಾಂತ್, ಹುಮಾಯೂನ್ ಖಾನ್, ವೆಂಕಟೇಶ್ ಪ್ರಸಾದ್, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮತ್ತಿತರರು ಹಾಜರಿದ್ದರು.