ಬೆಳಗಾವಿ : ಭಾರತ ದೇಶದ ಡಿಜಿಟಲ್ ಆರ್ಥಿಕತೆಯು ಇಂದು ಕೇವಲ ಗಾತ್ರದಿಂದ ಮಾತ್ರವಲ್ಲದೆ ಭೌಗೋಳಿಕ ವಿಸ್ತರಣೆಯೊಂದಿಗೂ ನಿರ್ಣಾಯಕ ಹೊಸ ಹಂತ ಪ್ರವೇಶಿಸುತ್ತಿದೆ. ಬೆಂಗಳೂರಿನ ತಂತ್ರಜ್ಞಾನ ಮತ್ತು ನಾವೀನ್ಯತಾ ಪರಿಸರ ವ್ಯವಸ್ಥೆ ಪ್ರಬುದ್ಧವಾಗುತ್ತಿದ್ದಂತೆ, ಕರ್ನಾಟಕ ರಾಜ್ಯ ಸರ್ಕಾರದ ಬಿಯಾಂಡ್ ಬೆಂಗಳೂರು ಮಿಷನ್‌ನ ಮೂಲಕ ರಾಜ್ಯದ ವಿವಿಧ ಪ್ರಾದೇಶಿಕ ಕ್ಲಸ್ಟರ್‌ಗಳಲ್ಲಿ ಹೊಸ ಹೂಡಿಕೆ, ಪ್ರತಿಭೆ ಮತ್ತು ಉದ್ಯಮಶೀಲತೆಯ ಹೊಸ ಎಂಜಿನ್‌ಗಳು ಸೃಷ್ಟಿಯಾಗುತ್ತಿವೆ.
ದಶಕಗಳ ಕೈಗಾರಿಕಾ ಸಾಮರ್ಥ್ಯದೊಂದಿಗೆ ತಂತ್ರಜ್ಞಾನ, ಸುಧಾರಿತ ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿಯನ್ನು ಒಗ್ಗೂಡಿಸಿರುವ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ವಲಯವು ಈ ದೃಷ್ಟಿಕೋನದ ಪ್ರಬಲ ಅಭಿವ್ಯಕ್ತಿಯಾಗಿ ಹೊರಹೊಮ್ಮಿದೆ. ಈ ಪರಿವರ್ತನೆಯನ್ನು ಬಿಂಬಿಸುವಂತೆ, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಬಿಯಾಂಡ್ ಬೆಂಗಳೂರು ಮಿಷನ್‌ನ ಪ್ರಮುಖ ಉಪಕ್ರಮವಾದ ಎಚ್‌ಡಿಬಿ ಟೆಕ್ಸಲರೇಷನ್ 2026ರ 6ನೇ ಆವೃತ್ತಿಯು ಈ ಪ್ರದೇಶದ ವಿಕಸನಗೊಳ್ಳುತ್ತಿರುವ ಪರಿಸರ ವ್ಯವಸ್ಥೆಯನ್ನು ಮುನ್ನೆಲೆಗೆ ತಂದಿತು. ಇದರಲ್ಲಿ ನೀತಿ ನಿರೂಪಕರು, ಉದ್ಯಮ ಮುಖಂಡರು, ಶಿಕ್ಷಣ ತಜ್ಞರು ಮತ್ತು ತಂತ್ರಜ್ಞಾನ ಪಾಲುದಾರರೊಂದಿಗೆ 700ಕ್ಕೂ ಹೆಚ್ಚು ಪ್ರತಿನಿಧಿಗಳು, 100ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಮತ್ತು 25ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಿದ್ದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಎಎಂ) ನೇತೃತ್ವದಲ್ಲಿ ನಡೆದ ಈ ಎರಡು ದಿನಗಳ ಸಮ್ಮೇಳನವು ಸುಧಾರಿತ ಹೈಟೆಕ್ ಉತ್ಪಾದನೆ, ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್, ಡೀಪ್ ಟೆಕ್, ಕೃತಕ ಬುದ್ಧಿಮತ್ತೆ (ಎಐ), ಇವಿ, ಸ್ಟಾರ್ಟಪ್‌ಗಳು, ಕೌಶಲ್ಯ ತರಬೇತಿ ಮತ್ತು ಎಂಎಸ್‌ಎಂಇ ನಾವೀನ್ಯತೆಗಳ ವ್ಯಾಪಕ ಅವಕಾಶಗಳನ್ನು ಪರಿಶೀಲಿಸಿತು. ಜತೆಗೆ ಎಂಜಿನಿಯರಿಂಗ್, ವಿನ್ಯಾಸ, ಎಂಬೆಡೆಡ್ ಸಿಸ್ಟಮ್ಸ್, ಸೆಮಿಕಂಡಕ್ಟರ್ ಮತ್ತು ಇವಿ ಪೂರೈಕೆ ಸರಪಳಿಗಳಲ್ಲಿ ಜಾಗತಿಕ ಸಂಪರ್ಕ ಹೊಂದಿದ ಸಾಮರ್ಥ್ಯಗಳನ್ನು ಎಚ್‌ಡಿಬಿ ಹೇಗೆ ನಿರ್ಮಿಸಬಹುದು ಎಂಬುದನ್ನು ಸಮಗ್ರವಾಗಿ ಚರ್ಚಿಸಿತು.
ಭಾಗವಹಿಸಿದವರನ್ನು ಸ್ವಾಗತಿಸಿ, ಚರ್ಚೆಗಳಿಗೆ ವೇದಿಕೆ ಕಲ್ಪಿಸಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಸಂಜೀವ್ ಕುಮಾರ್ ಗುಪ್ತಾ ಅವರ ಟಾಕ್ ಆಫ್ ದಿ ಟೌನ್ ಸಂವಾದದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಿತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕುಮಾರ್ ಗುಪ್ತಾ , “ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಪ್ರದೇಶವು ಅತ್ಯಂತ ಮಹತ್ವದ ತಿರುವಿನಲ್ಲಿದೆ. ಇದು ಆರಂಭಿಕ ಹಂತದ ತಂತ್ರಜ್ಞಾನ ಪರಿಸರದಿಂದ ಉದ್ಯಮ, ಸ್ಟಾರ್ಟಪ್‌ಗಳು, ಪ್ರತಿಭೆಗಳು ಮತ್ತು ಸಾಂಸ್ಥಿಕ ಸಾಮರ್ಥ್ಯಗಳ ಬಲಿಷ್ಠ ನೆಲೆಯಾಗಿ ಬೆಳೆಯುತ್ತಿದೆ. ಕಳೆದ 4-5 ವರ್ಷಗಳಲ್ಲಿ ಕೆಡಿಇಎಂ ಉದ್ಯಮ, ಶಿಕ್ಷಣ ಕ್ಷೇತ್ರ ಮತ್ತು ಇಕೋಸಿಸ್ಟಮ್ ಪಾಲುದಾರರೊಂದಿಗೆ ಸುಸ್ಥಿರ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದು, ಈಗ ಅದರ ಸ್ಪಷ್ಟ ಫಲಿತಾಂಶಗಳು ಗೋಚರಿಸುತ್ತಿವೆ. ಈ ಪ್ರದೇಶದಲ್ಲಿ ಪ್ರಸ್ತುತ 158 ಐಟಿ ಕಂಪನಿಗಳು ಹಾಗೂ ಡಿಪಿಐಐಟಿ ಮಾನ್ಯತೆ ಪಡೆದ 800ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ. ಸೆಂಟರ್ಸ್ ಆಫ್ ಎಕ್ಸಲೆನ್ಸ್ (ಸಿಓಇಗಳು) ಮತ್ತು 24 ಎಕರೆ ಐಟಿ ಪಾರ್ಕ್ ವ್ಯಾಪ್ತಿಯಲ್ಲಿ ₹56 ಕೋಟಿ ಸರ್ಕಾರದ ಬೆಂಬಲದೊಂದಿಗೆ 38 ಕಂಪನಿಗಳು ತಮ್ಮ ವಹಿವಾಟು ಹಾಗೂ ಉದ್ಯಮ ಕಾರ್ಯಾಚರಣೆಯನ್ನು ಆರಂಭಿಸಲು ಸಜ್ಜಾಗಿವೆ. ಜಪಾನಿ ಹೂಡಿಕೆಗಳು, ಏರ್‌ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಗೆ ಸಂಬಂಧಿಸಿದ ಉದಯೋನ್ಮುಖ ಅವಕಾಶಗಳು ಮತ್ತು ಸುಮಾರು 1,000 ಉದ್ಯೋಗಿಗಳನ್ನು ಹೊಂದಿರುವ ಐಮೆರಿಟ್ ಉಪಸ್ಥಿತಿಯೊಂದಿಗೆ ಎಚ್‌ಡಿಬಿ ಪ್ರದೇಶವು ತಂತ್ರಜ್ಞಾನ ಮತ್ತು ಉನ್ನತ ಮೌಲ್ಯದ ಕೈಗಾರಿಕಾ ಹೂಡಿಕೆಗಳನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುತ್ತಿದೆ. ಈಗ ನಮ್ಮ ಗಮನ ಅನುಷ್ಠಾನ, ಹೊಸ ಕಂಪನಿಗಳನ್ನು ಕಾರ್ಯಗತಗೊಳಿಸುವುದು, ಐಟಿ ಮತ್ತು ಸ್ಟಾರ್ಟಪ್ ಇಕೋಸಿಸ್ಟಮ್ ಬಲಪಡಿಸುವುದು ಹಾಗೂ ಪ್ರತಿ ವರ್ಷ ಲಭ್ಯವಾಗುವ 25,000 ಪ್ರತಿಭಾವಂತ ಯುವಕರ ಪಡೆಯನ್ನು ಸ್ಥಳೀಯ ಕೈಗಾರಿಕೆ ಮತ್ತು ಉದ್ಯಮಕ್ಕೆ ಸಿದ್ಧಪಡಿಸುವ ಗುಣಮಟ್ಟದ ಉದ್ಯೋಗಗಳನ್ನಾಗಿ ಪರಿವರ್ತಿಸುವುದರ ಮೇಲಿದೆ. ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯ ಸಂಪನ್ಮೂಲಗಳನ್ನು ಪರಸ್ಪರ ಬೆಸೆಯುವ ಮೂಲಕ, ಕಂಪನಿಗಳು ಕೇವಲ ಹೂಡಿಕೆ ಮಾಡಲು ಮಾತ್ರವಲ್ಲದೆ, ತಮ್ಮ ವಹಿವಾಟನ್ನು ಬೆಳೆಸಿ ವಿಸ್ತರಿಸಲು ಎಚ್‌ಡಿಬಿ ಸೂಕ್ತ ತಾಣವಾಗಬಲ್ಲದು” ಎಂದರು.
ಚರ್ಚೆಗೆ ಉದ್ಯಮದ ದೃಷ್ಟಿಕೋನವನ್ನು ತಂದ ಹುಬ್ಬಳ್ಳಿ-ಬೆಳಗಾವಿ ಲೀಡ್ ಆಂಕರ್ ಭಾಷಣದಲ್ಲಿ, ಎನ್ಎಸ್ ಇನ್ಫೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಾಗೂ ಹುಬ್ಬಳ್ಳಿಯ ಲೀಡ್ ಇಂಡಸ್ಟ್ರಿ ಆಂಕರ್ ಸಂತೋಷ್ ಹುರಳಿಕೊಪ್ಪಿ, ಮತ್ತು ಬೆಳಗಾವಿ ಆಕ್ಸಿಜನ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬೆಳಗಾವಿಯ ಲೀಡ್ ಇಂಡಸ್ಟ್ರಿ ಆಂಕರ್ ವೆಂಕಟೇಶ್ ಪಾಟೀಲ್ ಭಾಗವಹಿಸಿ, ಈ ಪ್ರದೇಶದ ಪ್ರಗತಿ ಮತ್ತು ಮುಂದಿನ ಬೆಳವಣಿಗೆಯ ಆಶಯಗಳನ್ನು ಹಂಚಿಕೊಂಡರು.
ಪ್ರಾದೇಶಿಕ ಹಿನ್ನೆಲೆಯನ್ನು ವಿವರಿಸಿದ ಬೆಳಗಾವಿ ಆಕ್ಸಿಜನ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬೆಳಗಾವಿಯ ಲೀಡ್ ಇಂಡಸ್ಟ್ರಿ ಆಂಕರ್ ವೆಂಕಟೇಶ್ ಪಾಟೀಲ್, “ಕಳೆದ ಕೆಲ ವರ್ಷಗಳಲ್ಲಿ ಎಚ್‌ಡಿಬಿ ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯಾದ್ಯಂತ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ಯೋಜನೆಗಳ ಬೆಂಬಲದೊಂದಿಗೆ ಉದ್ಯಮ, ಶಿಕ್ಷಣ ಮತ್ತು ಸರ್ಕಾರವನ್ನು ಒಗ್ಗೂಡಿಸುವ ಸಮಗ್ರ ಕ್ಲಸ್ಟರ್ ಮಾದರಿಯಾಗಿ ಬೆಳೆದಿದೆ. ಈ ಪ್ರದೇಶವು ತನ್ನ ಗಡಿಯಾಚೆಗಿನ ಪಾಲ್ಗೊಳ್ಳುವಿಕೆಯನ್ನೂ ಸೆಳೆಯುತ್ತಿದೆ. ಎಚ್‌ಡಿಬಿ ಬ್ಲೂ ನಲ್ಲಿ ಭಾಗವಹಿಸಿದ ಸ್ಟಾರ್ಟಪ್‌ಗಳಲ್ಲಿ ಶೇ. 40–50 ರಷ್ಟು ಬೆಂಗಳೂರು, ಗುಜರಾತ್ ಹಾಗೂ ಭಾರತದ ಇತರ ಭಾಗಗಳಿಂದ ಬಂದಿದ್ದರೆ, ಎಲಿವೇಟ್ ನ ಶೇ. 30–35 ರಷ್ಟು ಪಾಲ್ಗೊಳ್ಳುವಿಕೆ ಎಚ್‌ಡಿಬಿಯಿಂದ ಬಂದಿದೆ. ತಂತ್ರಜ್ಞಾನ, ಏರೋಸ್ಪೇಸ್ ಮತ್ತು ಸುಧಾರಿತ ಉತ್ಪಾದನೆಯಲ್ಲಿ ಅಪಾರವಾದ ಆಸಕ್ತಿ ಮತ್ತು ಉತ್ಸಾಹ ಹೆಚ್ಚುತ್ತಿದೆ. ಭಾರತ, ಯುರೋಪ್ ಮತ್ತು ಅಮೆರಿಕದಾದ್ಯಂತ ನಾವು ನಡೆಸಿದ ರೋಡ್‌ಶೋಗಳು ಎಚ್‌ಡಿಬಿಯನ್ನು ಹೂಡಿಕೆ ಮತ್ತು ನಾವೀನ್ಯತೆಯ ತಾಣವಾಗಿ ಬಿಂಬಿಸಲು ಸಹಕಾರಿಯಾಗಿವೆ, ಆದರೂ ನಾವು ಸಾಗಬೇಕಾದ ಹಾದಿ ಇನ್ನೂ ಸಾಕಷ್ಟಿದೆ. ಮುಂದಿನ ಹಂತಕ್ಕೆ ಉದ್ಯಮದ ಹೆಚ್ಚಿನ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಕೆಡಿಇಎಂ ಸೂಕ್ತ ವೇದಿಕೆ ಮತ್ತು ಪೂರಕ ವಾತಾವರಣ ಸೃಷ್ಟಿಸಬಲ್ಲದು, ಆದರೆ ಈ ವೇಗವನ್ನು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನಾಗಿ ಪರಿವರ್ತಿಸಲು ಉದ್ಯಮವು ಶಿಕ್ಷಣ ಕ್ಷೇತ್ರದೊಂದಿಗೆ ಕೈಜೋಡಿಸಿ, ಪ್ರತಿಭೆಗಳನ್ನು ರೂಪಿಸಿ, ಉತ್ತಮ ಹೊಸ ಉದ್ಯೋಗಾವಕಾಶಗಳನ್ನು ನಿರಂತರವಾಗಿ ಸೃಷ್ಟಿಸಬೇಕು” ಎಂದು ಅಭಿಪ್ರಾಯಪಟ್ಟರು.
ನಂತರ ಸಂವಾದವು ಕಲ್ಪನೆಯಿಂದ ಕ್ರಿಯೆಯ ಕಡೆಗೆ ಮುಂದುವರಿಯಿತು. ಫೈರ್‌ಸೈಡ್ ಚಾಟ್ ಗಳು, ಪ್ಯಾನಲ್ ಚರ್ಚೆಗಳು ಮತ್ತು ಉದ್ಯಮ-ನೇತೃತ್ವದ ಸಂವಾದಗಳ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಕೈಗಾರಿಕಾ ಉತ್ಪಾದನೆಯಲ್ಲಿ ಜಾಗತಿಕ ಸ್ಪರ್ಧಾತ್ಮಕ ಸಾಮರ್ಥ್ಯಗಳನ್ನು ಬೆಳೆಸಲು ಎಚ್‌ಡಿಬಿ ತನ್ನ ಕೈಗಾರಿಕಾ ಅಡಿಪಾಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪರಾಮರ್ಶಿಸಲಾಯಿತು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ. ವಿ. ನಾಯ್ಡು ಮಾತನಾಡಿ, “ಬಿಯಾಂಡ್ ಬೆಂಗಳೂರು ಯೋಜನೆಗೆ ನಿರಂತರ ಬೆಂಬಲ ನೀಡುತ್ತಿರುವ ಮತ್ತು ಈ ಪ್ರದೇಶದ ಬೆಳವಣಿಗೆಗೆ ಕಾರಣವಾಗಿರುವ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ರಾಜ್ಯ ಸರ್ಕಾರ ಮತ್ತು ಕೆಡಿಇಎಂ ಈ ಬೆಳವಣಿಗೆಯ ವೇಗಕ್ಕೆ ಅಗತ್ಯವಾದ ವೇದಿಕೆ ಮತ್ತು ಬೆಂಬಲವನ್ನು ಸೃಷ್ಟಿಸಿದ್ದು, ತಂತ್ರಜ್ಞಾನ ಮತ್ತು ನಾವೀನ್ಯತಾ ಕ್ಲಸ್ಟರ್ ಆಗಿ ಎಚ್‌ಡಿಬಿಯ ಬೆಳವಣಿಗೆಯ ಸಾಮರ್ಥ್ಯವನ್ನು ನಾವೀಗ ಕಾಣುತ್ತಿದ್ದೇವೆ. ಮುಂದಿನ ಹೆಜ್ಜೆಯೆಂದರೆ ಬಲವಾದ ಉದ್ಯಮ ಪಾಲ್ಗೊಳ್ಳುವಿಕೆ. ₹25 ಕೋಟಿ ಕ್ಲಸ್ಟರ್ ಫಂಡ್‌ನಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು, ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು, ಹೂಡಿಕೆ ಆಕರ್ಷಿಸಲು ಮತ್ತು ಎಚ್‌ಡಿಬಿಯನ್ನು ತನ್ನದೇ ಬಲವಾದ ಗುರುತನ್ನುಹೊಂದಿರುವ ನಾವೀನ್ಯತಾ ಕ್ಲಸ್ಟರ್ ಆಗಿ ರೂಪಿಸಲು ಉದ್ಯಮ, ಶಿಕ್ಷಣ ಕ್ಷೇತ್ರ, ಉದ್ಯಮಿಗಳು ಮತ್ತು ಸರ್ಕಾರ ಒಟ್ಟಾಗಿ ಶ್ರಮಿಸಬೇಕು” ಎಂದರು.