ಕುಕನೂರು, ನ.19: ಮಹಿಳಾ ಗ್ರಾಮ ಆಡಳಿತ ಅಧಿಕಾರಿ ರಾಣಿ ಹಳ್ಳಿ ಅವರನ್ನು ಮತ್ತೆ ಬಳಗೇರಿ ಗ್ರಾಮಕ್ಕೆ ನಿಯೋಜಿಸುವಂತೆ ಆಗ್ರಹಿಸಿ ಬಳಗೇರಿ ಹಾಗೂ ಬುದಗುಂಪಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ಗುರುವಾರ ಕುಕನೂರು ತಹಶೀಲ್ದಾರ ಬಸವರಾಜ ಬೆಣ್ಣೆ ಶಿರೂರು ಅವರಿಗೆ ಮನವಿ ಸಲ್ಲಿಸಿದರು.
ರಾಣಿ ಹಳ್ಳಿ ಅವರು ಹಲವು ವರ್ಷಗಳಿಂದ ಬಳಗೇರಿ ವೃತ್ತದ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ರಾಜಕೀಯ ಪ್ರಭಾವ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರ ಶಿಫಾರಸು ಪತ್ರದ ಮೂಲಕ ಅವರನ್ನು ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮಕ್ಕೆ ನಿಯೋಜಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈಗಾಗಲೇ ಕುಕನೂರು ತಾಲ್ಲೂಕಿನ ನಾಲ್ಕೈದು ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಇಂತಹ ಸಂದರ್ಭದಲ್ಲಿ ಬಳಗೇರಿ ಗ್ರಾಮದ ಅಧಿಕಾರಿಯನ್ನು ಬೇರೆಡೆಗೆ ನಿಯೋಜಿಸಿರುವುದರಿಂದ ರೈತರು ಮತ್ತು ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಕೆಲಸಗಳಿಗೆ ತೊಂದರೆಯಾಗಲಿದೆ. ಪಹಣಿ, ಜಮೀನಿನ ದಾಖಲೆಗಳು ಹಾಗೂ ವಿವಿಧ ಪ್ರಮಾಣಪತ್ರಗಳಿಗಾಗಿ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ರಾಣಿ ಹಳ್ಳಿ ಅವರನ್ನು ಮತ್ತೆ ಬಳಗೇರಿಗೆ ನಿಯೋಜಿಸಬೇಕು ಎಂದು ಮನವಿದಾರರು ಒತ್ತಾಯಿಸಿದರು.
ಸರ್ಕಾರಿ ನೌಕರರು ರಾಜಕೀಯ ಹಾಗೂ ಖಾಸಗಿ ಒತ್ತಡವಿಲ್ಲದೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ಅನಗತ್ಯ ಹಸ್ತಕ್ಷೇಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಸುರೇಶ ಬಳೂಟಗಿ ಸೇರಿದಂತೆ ಲಕ್ಷ್ಮಣ ಕಮ್ಮಾರ್, ಯಂಕಣ್ಣ ಆರೇರ್, ಶಿವು ಅರಕೇರಿ, ಶಿವಕುಮಾರ ಮುದ್ಲಾಪೂರ, ಮಂಜುನಾಥ ರಡ್ಡೇರ, ಶರಣಪ್ಪ ಬಾರಕೇರ, ಈರಪ್ಪ ಭಜಂತ್ರಿ ಹಾಗೂ ಮಾರುತಿ ಭಜಂತ್ರಿ ಸೇರಿದಂತೆ ಹಲವು ಗ್ರಾಮಸ್ಥರು ಮನವಿಗೆ ಸಹಿ ಹಾಕಿದರು. ತಹಶೀಲ್ದಾರ್ ಮನವಿ ಸ್ವೀಕರಿಸಿದ್ದು, ಜಿಲ್ಲಾಡಳಿತದ ಮುಂದಿನ ನಿರ್ಧಾರಕ್ಕಾಗಿ ಗ್ರಾಮಸ್ಥರು ಕಾಯುತ್ತಿದ್ದಾರೆ.