*ಸಿರುಗುಪ್ಪ:19: ತಾಲೂಕಿನಲ್ಲಿ ಮಳೆ ಕೊರತೆ ಮತ್ತು ಕಾಲುವೆಯಲ್ಲಿ ನೀರಿಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಕೃಷಿಯನ್ನು ಬಿಡದ ಇಬ್ರಾಹಿಂಪುರದ ರೈತ ಹುಸೇನ್ ಪೀರಾ ಅವರು ಮಾದರಿಯಾಗಿದ್ದಾರೆ.
ತಮ್ಮ ಗದ್ದೆಯಲ್ಲಿ ನಾಟಿಗಾಗಿ ಸಿದ್ಧಪಡಿಸಿದ್ದ ಸಸಿ ಮಡಿಗಳಿಗೆ ನೀರಿಲ್ಲದೆ ಒಣಗುವ ಸ್ಥಿತಿ ಬಂದಾಗ, ಹುಸೇನ್ ಪೀರಾ ಅವರು ಸ್ವಂತ ಖರ್ಚಿನಲ್ಲಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿಸಿದ್ದಾರೆ. ಟ್ಯಾಂಕರ್ ಮೂಲಕ ತಂದು ಪೈಪ್‌ಗಳ ಸಹಾಯದಿಂದ ಸಸಿ ಮಡಿಗಳಿಗೆ ನೀರು ಹರಿಸಿ ಸಸಿಗಳನ್ನು ರಕ್ಷಿಸುತ್ತಿದ್ದಾರೆ.
"ಮಳೆ ಬರುವವರೆಗೂ ಕಾಯದೆ, ಸಾಲ ಮಾಡಿಯಾದರೂ ಸಸಿಗಳನ್ನು ಉಳಿಸಿಕೊಳ್ಳಬೇಕು. ಒಂದು ಸಸಿ ಹೋದರೂ ನಷ್ಟವೇ" ಎಂದು ಹುಸೇನ್ ಪೀರಾ ಅವರು ಹೇಳಿದರು.
ರೈತನ ಈ ಪ್ರಯತ್ನವನ್ನು ನೋಡಿದ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರ ಕೂಡ ಇಂತಹ ರೈತರಿಗೆ ತುರ್ತು ನೀರಿನ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದರೂ, ಹುಸೇನ್ ಪೀರಾ ಅವರಂತಹ ರೈತರ ಪರಿಶ್ರಮದಿಂದ ಕೃಷಿ ಚೇತರಿಸಿಕೊಳ್ಳುವ ಭರವಸೆ ಮೂಡಿದೆ.