2022- 23 ರಲ್ಲಿ 50 ರಿಂದ 60 ಸಾವಿರ ರೂ. ವರಗೆ ಒಂದು ಕ್ವಿಂಟಲ್ ಮೆಣಸಿನಕಾಯಿ ಬೆಳೆ ಮಾರಾಟವಾಗಿತ್ತು. ಆದರೆ ಈ ವರ್ಷ ಸಂಪೂರ್ಣ ಕುಸಿತ ಕಂಡಿದೆ. ಒಂದು ಕ್ವಿಂಟಲ್ ಮೆಣಸಿನಕಾಯಿಗೆ 8 ರಿಂದ 10 ಸಾವಿರ ರೂ. ಮಾತ್ರ ದೊರೆಯುತ್ತಿದೆ. ಹೀಗಾಗಿ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ. ಒಂದು ಎಕರೆ ಮೆಣಸಿನಕಾಯಿ ಬೆಳೆಗೆ ಸುಮಾರು 2 ಲಕ್ಷ ರೂ. ವರಗೆ ಖರ್ಚು ಮಾಡಿದ ರೈತ ಲಾಭಾವೂ ಇಲ್ಲದೆ, ಅಸಲೂ ದೊರೆಯದೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಿ ಮೆಣಸಿನಕಾಯಿ ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಒಂದು ಎಕರೆ ಮೆಣಸಿನಕಾಯಿ ಬೆಳೆಯಬೇಕಿದ್ದರೆ ಬೀಜ, ರಸಗೊಬ್ಬರ, ಕಿಟನಾಶಕ, ಕೂಲಿ ಆಳು, ಕಳೆನಾಶಕ, ಕಟಾವು, ಸಾರಿಗೆ ವೆಚ್ಚ ಇವೆಲ್ಲ ಸೇರಿ ಹತ್ತಾರು ಸಾವಿರ ರೂ. ಖರ್ಚಾಗುತ್ತದೆ. ಕನಿಷ್ಠ ಅಂದರೂ ಒಂದು ಕ್ವಿಂಟಲ್ ಮೆಣಸಿನಕಾಯಿ ಬೆಳೆಗೆ 40 ರಿಂದ 50 ಸಾವಿರ ರೂ. ವರಗೆ ಮಾರಾಟವಾದರೆ ಹೇಗೋ ಅಸಲು ಹೊಂದಿಸಿಕೊಳ್ಳಬುದೇನೋ. ಆದರೆ, ಈಗ ಎಂಟು ಸಾವಿರ ರೂಪಾಯಿಗೂ ಕೇಳುವವರು ಇಲ್ಲವಾಗಿದ್ದಾರೆ. ಹೀಗಾಗಿ ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ.