ಹಸಿರು ಕ್ರಾಂತಿ ಬೈಲಹೊಂಗಲ
ಚನ್ನಮ್ಮನ ದೇಶಭಕ್ತಿ, ದೇಶಪ್ರೇಮ ನಮಗೆಲ್ಲ ಮಾದರಿಯಾಗಿದ್ದು, ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಬಲಿಷ್ಠ ಭಾರತದತ್ತ ಸಾಗಬೇಕಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.
ನಗರದ ಅಕ್ಕ ಮಹಾದೇವಿ ಮಹಿಳಾ ಪದವಿ ಕಾಲೇಜಿನ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ ಸ್ಮರಣೋತ್ಸವ ಸಮಿತಿ ವತಿಯಿಂದ ಸಾಹಿತಿ ಪ್ರೊ.ಎಫ್.ಡಿ.ಗಡ್ಡಿಗೌಡರ ವಿರಚಿತ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮ ಮತ್ತು ಚಂಡಿ ಚಾಮುಂಡಿಯಾಗಿ ರುಂಡ ಕಡಿದಾಳೊ ಚನ್ನಮ್ಮ ಯುಟ್ಯೂಬ್ ಗೀತೆಗಳನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಅವರು, ಚನ್ನಮ್ಮನ ಇತಿಹಾಸ, ಅವಳ ಶೌರ್ಯ, ಸಾಹಸ ಹಾಗೂ ತ್ಯಾಗ ಬಲಿದಾನ ಇಂದಿನ ಯುವ ಪಿಳಿಗೆ ತಿಳಿಸುವ ಮಹತ್ತರ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿದೆ. ಜನ್ ಝಿ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಹುನ್ನಾರು ದೇಶಾದ್ಯಂತ ನಡೆದಿದ್ದು, ಇಂತವರಿಂದ ದೂರವಿದ್ದು ಜಗತ್ತಿನ ಆಧ್ಯಾತ್ಮಿಕ ಕೇಂದ್ರ ಭಾರತದ ಭವಿಷ್ಯದ ನಾಯಕಾರಾಗಿ ಯುವ ಶಕ್ತಿ ಹೊರಹೊಮ್ಮಲಿ ಎಂದು ಆಶಿಸಿದರು.
ಮಾಜಿ ಶಾಸಕ ಡಾ.ವಿ.ಐ.ಪಾಟೀಲ ಚಿತ್ರ ಸುರಳಿ ಬಿಡುಗಡೆ ಮಾಡಿ ಮಾತನಾಡಿ, ಚನ್ನಮ್ಮನ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ. ಬೇರೆ ಬೇರೆ ದೇಶಗಳಲ್ಲಿ ಚನ್ನಮ್ಮನ ಅಭಿಮಾನಿಗಳು ಇದ್ದಾರೆ. ಆದರೆ, ನಮ್ಮ ನಾಡಿನಲ್ಲಿ ಇರುವ ಎಷ್ಟೋ ಜನರಿಗೆ ಚೆನ್ನಮ್ಮನ ಇತಿಹಾಸ ಗೊತ್ತಿಲ್ಲ. ಕೇವಲ ತಾತ್ಕಾಲಿಕ ಮನೋರಂಜನೆ ನೀಡುವ ಸಾಹಿತ್ಯಕ್ಕಿಂತ ಸಮಾಜವನ್ನು ಗಟ್ಟಿಯಾಗಿ ಕಟ್ಟುವ ಮನ, ಮನಸ್ಸು ಬಂಧನಕಾರಿಯಾಗುವ ಸಾಹಿತ್ಯ ಬೇಕಾಗಿದೆ ಎಂದು ತಿಳಿಸಿದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಚನ್ನಮ್ಮ ಕೇವಲ ಒಂದು ವ್ಯಕ್ತಿ ಅಲ್ಲ, ಅವಳು ಈ ನಾಡಿನ ಮತ್ತು ದೇಶದ ಶಕ್ತಿ. ಅವಳ ದಿಟ್ಟತನ ಮತ್ತು ಮನೋಬಲ ಹಾಗೂ ಪ್ರತಿರೋಧದ ಭಾವ ಬ್ರಿಟಿಷರು ಭಾರತವನ್ನು ಬಿಟ್ಟು ಓಡಿ ಹೋಗಲು ಮುನ್ನುಡಿ ಬರೆಯಿತು. ಇವತ್ತು ಮಹಾನ್ ಸೇನಾನಿ ಚನ್ನಮ್ಮನನ್ನು ನಾವು ಮರೆಯುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಮಾತನಾಡಿ, ಈ ದೇಶದ ಸ್ವಾತಂತ್ರ್ಯಕ್ಕೆ ಅಮೋಘವಾದ ಇತಿಹಾಸ ಇದೆ. ಆಂಗ್ಲರ ವಿರುದ್ಧ ಪ್ರಥಮವಾಗಿ ಹೋರಾಟ ಮಾಡಿದ ಕೀರ್ತಿ ಚನ್ನಮ್ಮನಿಗೆ ಸಲ್ಲುತ್ತದೆ. ಅವಳ ಸ್ವಾಭಿಮಾನ ಮತ್ತು ಕೆಚ್ಚೆದೆ ನಮಗೆಲ್ಲ ಸ್ಫೂರ್ತಿ ಎಂದರು.
ಸಾಹಿತಿ ಪ್ರೊ.ಎಫ್.ಡಿ.ಗಡ್ಡಿಗೌಡರ ಸಾಹಿತ್ಯ ರಚನೆಯ ಉದ್ದೇಶ ಮತ್ತು ಪ್ರೇರಣೆ ಹಾಗೂ ಕಲಾವಿದರನ್ನು ಕರೆದುಕೊಂಡು ಗೀತೆಗಳನ್ನು ಸಿದ್ಧಪಡಿಸಿದ ಅನುಭವಗಳನ್ನು ಹಂಚಿಕೊಂಡರು.
ಮುರುಗೇಶ ಗುಂಡ್ಲೂರ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಬೋಳನ್ನವರ ಮತ್ತು ಮಹೇಶ ಹರಕುಣಿ, ಮೋಹನ ಬಸವನಗೌಡ ಪಾಟೀಲ ಇದ್ದರು.
ಸಾಹಿತಿ ಪ್ರೊ.ಎಫ್.ಡಿ.ಗದ್ದಿಗೌಡರ, ಕಲಾವಿದರಾದ ರವಿ ಶಂಕರ, ಮಲ್ಲಿಕಾ, ನಿರ್ಮಲಾ ಅವರನ್ನು ಪೂಜ್ಯರು ಹಾಗೂ ಅತಿಥಿಗಳು ಸತ್ಕರಿಸಿದರು.
ಸಿದ್ದಾರೂಢ ಹೊಂಡಪ್ಪನವರ ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ನೇಸರಗಿ, ಮಂಜುನಾಥ ಬಾಗೆವಾಡಿ, ಡಿ.ಎಂ.ಶಿರಗಾಂವಿ, ಮಡಿವಾಳಪ್ಪ ಚಿಕ್ಕೊಪ್ಪ, ಭರತ ಹುಣಶಿಕಟ್ಟಿ, ಅರುಣ ಬೋಳೆತ್ತಿನ, ಚಂದನ ಕೌಜಲಗಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಶಿಕ್ಷಕರು ಸಾರ್ವಜನಿಕರು ಇದ್ದರು.
ಕಿತ್ತೂರು ಗಂಡು ಮೆಟ್ಟಿನ ನಾಡು. ರಾಯಣ್ಣ ಮತ್ತು ಬಾಳಣ್ಣ ಮುಂತಾದ ಮಹಾನ್ ಸೇನಾನಿಗಳ ಹೋರಾಟದ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು. ಈ ದೆಸೆಯಲ್ಲಿ ಸಾಹಿತಿ ಪ್ರೊ.ಎಫ್.ಡಿ.ಗಡ್ಡಿಗೌಡರ ರಚಿಸಿದ ಸಾಹಿತ್ಯ ತುಂಬ ಮೌಲ್ಯಯುತ ಮತ್ತು ಉತ್ಕೃಷ್ಟವಾಗಿದೆ. ಇಂತಹ ಉತ್ತಮ ಸಾಹಿತ್ಯವನ್ನು ಹೆಚ್ಚು ಜನರಿಗೆ ಪ್ರಸಾರ ಮಾಡಿ ಚನ್ನಮ್ಮನ ಇತಿಹಾಸವನ್ನು ಸಾಹಿತ್ಯದ ಮೂಲಕ ಪರಿಚಯಿಸುವ ಕೆಲಸ ಮಾಡಲು ಚನ್ನಮ್ಮನವರ ಸ್ಮರಣೋತ್ಸವ ಸಮಿತಿ ಮುಂದೆ ಬಂದಿರುವುದು ಅಭಿನಂದನಾರ್ಹ.
-ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಕೂಡಲ ಸಂಗಮ ಪಂಚಮಸಾಲಿ ಮಹಾಪೀಠದ ಜಗದ್ಗುರು.
ಯುವ ಜನಾಂಗ ಮನಸುಗಳನ್ನು ಹಾಳು ಮಾಡುವ ಸಾಹಿತ್ಯವನ್ನು ಬಿಟ್ಟು ಮನಸುಗಳನ್ನು ಕಟ್ಟುವ ಮತ್ತು ದೇಶ ಪ್ರೇಮದ ಸಾಹಿತ್ಯ ಇಂದಿನ ಅಗತ್ಯವಾಗಿದೆ. ಚನ್ನಮ್ಮನ ಕುರಿತಾಗಿ ಹೊರಬಂದ ಎರಡೂ ವಿಡಿಯೋ ಸಾಂಗ್ಸ್ಗಳು ಚನ್ನಮ್ಮನ ಇತಿಹಾಸ ಮತ್ತು ವ್ಯಕ್ತಿತ್ವವನ್ನು ಅದ್ಭುತವಾಗಿ ಅನಾವರಣಗೊಳಿಸುತ್ತವೆ.
-ಡಾ.ವಿ.ಐ.ಪಾಟೀಲ, ಮಾಜಿ ಶಾಸಕರು.
ಚನ್ನಮ್ಮಳ ಇತಿಹಾಸ ಯುವ ಪೀಳಿಗೆಗೆ ತಲುಪಬೇಕಿದೆ. ಅದನ್ನು ಸಾಹಿತ್ಯ ಮತ್ತು ಸಂಗೀತ ಹಾಗೂ ನೃತ್ಯದ ಮೂಲಕ ಪ್ರದರ್ಶಿಸಿದಾಗ ಇನ್ನೂ ಪರಿಣಾಮಕಾರಿಯಾಗಿ ಇತಿಹಾಸ ಹೆಚ್ಚು ಜನರಿಗೆ ತಲುಪಲು ಸಾಧ್ಯ. ಎಫ್.ಡಿ.ಮ್ಯೂಸಿಕ್ ಮತ್ತು ಬಾಗಲಕೋಟೆ ಉಡಾಳ ಯುಟ್ಯೂಬ್ರ ಮಾಡಿರುವ ವಿಡಿಯೋ ಸಾಂಗ್ಸ್ ಶ್ಲಾಘನೀಯ. ಎಲ್ಲ ಕನ್ನಡದ ಮನಸುಗಳು ಈ ಹಾಡುಗಳನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸಬೇಕು. ಕಿತ್ತೂರು ಉತ್ಸವದಲ್ಲಿ ಪ್ರಸಾರವಾಗಲಿ.
-ಎಫ್.ಎಸ್.ಸಿದ್ದನಗೌಡರ, ನ್ಯಾಯವಾದಿ.