ಎನ್ವಿಎಸ್ಪಿ (NVSP), ವಿಹೆಎ (VHA), ಗರುಡ (GARUDA) ಆ್ಯಪ್ಗಳ ಮೂಲಕ ಮತದಾರರ ಹೆಸರನ್ನು ಡಿಲೀಟ್ ಮಾಡಲು 6,018 ಅರ್ಜಿಗಳು ಬಂದಿದ್ದವು. ಪರಿಶೀಲನೆಯ ನಂತರ ಕೇವಲ 24 ಅರ್ಜಿಗಳು ನಿಜವಾಗಿದ್ದವು. ಉಳಿದ 5,994 ಅರ್ಜಿಗಳನ್ನು ತಿರಸ್ಕರಿಸಲಾಯಿತು ಎಂದು ಆಯೋಗ ತಿಳಿಸಿದೆ.
ಆ ಅರ್ಜಿಗಳನ್ನು ತಕ್ಷಣವೇ ಡಿಲೀಟ್ ಮಾಡಿರಲಿಲ್ಲ. ಬದಲಾಗಿ ದೂರು ದಾಖಲಿಸಿ ತನಿಖೆಗೆ ಮುಂದಾಗಿದ್ದೆವು. 2023 ರ ಸೆಪ್ಟೆಂಬರ್ 6 ರಂದು ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರು ಲಭ್ಯವಿದ್ದ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು ಮತ್ತು ನಂತರ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದ್ದರು ಎಂದು ಆಯೋಗ ತಿಳಿಸಿದೆ.
ತನಿಖಾ ತಂಡಕ್ಕೆ ಒದಗಿಸಿದ ಮಾಹಿತಿಯಲ್ಲಿ ಫಾರ್ಮ್ ರೆಫರೆನ್ಸ್ ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, EPIC ಸಂಖ್ಯೆ, ಲಾಗಿನ್ಗೆ ಬಳಸಿದ ಮೊಬೈಲ್ ಸಂಖ್ಯೆ, IP ವಿಳಾಸ, ಅರ್ಜಿ ಸಲ್ಲಿಸಿದ ದಿನಾಂಕ-ಸಮಯ ಮತ್ತು ಸ್ಥಳ ಮಾಹಿತಿ ಸೇರಿವೆ ಎಂದೂ ಆಯೋಗ ಸ್ಪಷ್ಟಪಡಿಸಿದೆ.ಚುನಾವಣಾ ಆಯೋಗವು ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾಗಿ ಸ್ಪಷ್ಟಪಡಿಸಿದ್ದು, ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದೆ.