ಮುದ್ದೇಬಿಹಾಳ: ದಾನಗಳಲ್ಲಿ ವಿದ್ಯಾದಾನ ಸರ್ವಶ್ರೇಷ್ಠವಾದುದು. ಇಂತಹ ಮಹತ್ವದ ದಾನ ಕಾರ್ಯದಲ್ಲಿ ಮುದ್ದೇಬಿಹಾಳ ಪಟ್ಟಣದ ಓಸ್ವಾಲ್ ಕುಟುಂಬ ಸದಾ ಮುಂಚೂಣಿಯಲ್ಲಿದೆ. ಈ ಕುಟುಂಬ ನೀಡಿದ ಭೂಮಿಯಲ್ಲಿಯೇ ಇಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಹಲಡಗೇರಿ ರಸ್ತೆಯಲ್ಲಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಶ್ರೀಮತಿ ಪಾರ್ವತಿಬಾಯಿ ಭೋರಮಲ್ ಓಸ್ವಾಲ್ (ಜೈನ್) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುದ್ದೇಬಿಹಾಳದ ಎಂಜಿವ್ಹಿಸಿ ಕಾಲೇಜಿಗಾಗಿ ಮಾತೋಶ್ರೀ ಗಂಗಮ್ಮನವರು ತಮ್ಮ ಭೂಮಿಯನ್ನು ದಾನವಾಗಿ ನೀಡಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಅದೇ ರೀತಿಯಲ್ಲಿ ಓಸ್ವಾಲ್ ಕುಟುಂಬವೂ ಸರ್ಕಾರಿ ಐಟಿಐ ಸಂಸ್ಥೆಗೆ ಭೂಮಿ ನೀಡುವುದರ ಜೊತೆಗೆ ಆಲಮಟ್ಟಿ ರಸ್ತೆಯಲ್ಲಿರುವ ಪದವಿ ಕಾಲೇಜಿಗೂ ಮೂರು ಎಕರೆ ಭೂಮಿಯನ್ನು ದಾನವಾಗಿ ನೀಡಿದೆ. ಇದರಿಂದ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ದೊರೆತಿದೆ ಎಂದರು.
ಭೂದಾನ ಮಾಡಿದ ಕುಟುಂಬದ ಸೇವೆ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಈ ಸಂಸ್ಥೆಯ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಪಡೆದು ಜೀವನದಲ್ಲಿ ಸಾಧನೆ ಮಾಡಬೇಕು. ಆಗ ಮಾತ್ರ ದಾನಿಗಳ ಉದ್ದೇಶ ಈಡೇರುತ್ತದೆ ಎಂದು ಶಾಸಕ ನಾಡಗೌಡ ಹೇಳಿದರು.
ಮುದ್ದೇಬಿಹಾಳದಲ್ಲೇ ಬಾಲಕಿಯರು, ಬಾಲಕರಿಗೆ ಐಟಿಐ:
ಕೈಗಾರಿಕಾ ತರಬೇತಿ ಇಲಾಖೆಯ ಬೆಳಗಾವಿ ವಿಭಾಗೀಯ ಉಪನಿರ್ದೇಶಕ ಡಾ.ಬಸವಪ್ರಭು ಹಿರೇಮಠ ಮಾತನಾಡಿ, ರಾಜ್ಯದಲ್ಲೇ ಒಂದೇ ತಾಲೂಕಿನಲ್ಲಿ ಬಾಲಕಿಯರ ಹಾಗೂ ಬಾಲಕರಿಗಾಗಿ ಪ್ರತ್ಯೇಕ ಕೈಗಾರಿಕಾ ತರಬೇತಿ ಸಂಸ್ಥೆಗಳು ಇರುವುದು ಮುದ್ದೇಬಿಹಾಳ ತಾಲೂಕಿನ ವಿಶೇಷತೆ. 1991ರಲ್ಲಿ ನಾಲತವಾಡದಲ್ಲಿ ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರವನ್ನು ಅಂದಿನ ಕಾರ್ಮಿಕ ಸಚಿವರಾಗಿದ್ದ ಸಿ.ಎಸ್.ನಾಡಗೌಡ ಅವರೇ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.
ಯುವಜನರಿಗೆ ಕೇವಲ ಪದವಿ ಶಿಕ್ಷಣ ನೀಡಿದರೆ ಸಾಲದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಕೌಶಲ್ಯವೂ ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶದ ಯುವಕರು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೈಗಾರಿಕಾ ತರಬೇತಿ ಮೂಲಕ ಯುವಕರಿಗೆ ಉದ್ಯೋಗ ಹಾಗೂ ಸ್ವಾವಲಂಬನೆಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದರು.
ಸಂಸ್ಥೆಗೆ ಅಗತ್ಯವಿರುವ ಯಾವುದೇ ಮೂಲಸೌಕರ್ಯ ಅಥವಾ ಉಪಕರಣಗಳ ಕುರಿತು ಶಾಸಕರ ಗಮನಕ್ಕೆ ತಂದರೆ, ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ನಾಡಗೌಡ ಭರವಸೆ ನೀಡಿದ್ದಾರೆ ಎಂದು ಡಾ.ಹಿರೇಮಠ ತಿಳಿಸಿದರು.
ಕೋಟಿ ಮೌಲ್ಯದ ಭೂದಾನ; ಓಸ್ವಾಲ್ ಕುಟುಂಬಕ್ಕೆ ಗೌರವ:
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ದಾನವಾಗಿ ನೀಡಿದ ಶ್ರೀಮತಿ ಪಾರ್ವತಿಬಾಯಿ ಭೋರಮಲ್ ಓಸ್ವಾಲ್, ಡಾ.ದಲಿತಚಂದ ಭೋರಮಲ್ ಓಸ್ವಾಲ್, ನರೇಂದ್ರ ಭೋರಮಲ್ ಓಸ್ವಾಲ್, ಮೋಹನ ಭೋರಮಲ್ ಓಸ್ವಾಲ್ ಹಾಗೂ ವಿಲಾಸ ಭೋರಮಲ್ ಓಸ್ವಾಲ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಎಸ್.ಅವರಾದಿ, ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಬಿಇಒ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎ.ಬಿ.ರೆಡ್ಡಿ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.