LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಶಿಕ್ಷಣ, ಜಾಗೃತಿಯಿಂದಲೇ ಸಮುದಾಯದ ಅಭಿವೃದ್ಧಿ: ಸಚಿವ ಸತೀಶ್ ಜಾರಕಿಹೊಳಿ

*ಬೆಳಗಾವಿ ಜಿಲ್ಲಾ ಮಟ್ಟದ ವಾಲ್ಮೀಕಿ ಸಮ್ಮೇಳನ ಉದ್ಘಾಟಿಸಿದ ಸಚಿವರು

ಬೆಳಗಾವಿ: ಶಿಕ್ಷಣದ ಕೊರತೆ, ಮೂಢನಂಬಿಕೆ, ಅಂಧಶ್ರದ್ಧೆ ಸೇರಿದಂತೆ ಹಲವು ಕಾರಣಗಳಿಂದ ದಶಕಗಳ ಕಾಲ ಹಿಂದುಳಿದಿದ್ದ ಸಮುದಾಯಗಳು ಇದೀಗ ಜಾಗೃತಿ ಹಾಗೂ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರುತ್ತಿವೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ಬೆಳಗಾವಿ ಜಿಲ್ಲಾ ಮಟ್ಟದ ವಾಲ್ಮೀಕಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಬೆಳಗಾವಿ, ಖಾನಾಪುರ ಹಾಗೂ ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಕಳೆದ ಹಲವು ದಶಕಗಳಿಂದ ಸಮುದಾಯವನ್ನು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಜಾಗೃತಗೊಳಿಸುವ ಪ್ರಯತ್ನಗಳು ನಡೆದಿವೆ. ಕಾಸ್ಟ್ ಸರ್ಟಿಫಿಕೇಟ್ ಸೇರಿದಂತೆ ಸಮುದಾಯಕ್ಕೆ ದೊರೆಯಬೇಕಾದ ಹಕ್ಕು–ಸೌಲಭ್ಯಗಳಿಗಾಗಿ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಇದರ ಫಲವಾಗಿ 30-40 ವರ್ಷಗಳ ನಂತರ ಸಮುದಾಯದಲ್ಲಿ ಸಾಕಷ್ಟು ಬದಲಾವಣೆ ಕಾಣಿಸುತ್ತಿದೆ ಎಂದರು.
ಒಂದು ಸಮುದಾಯದ ಜನರು ರಾಜಕೀಯ, ಸರ್ಕಾರಿ ನೌಕರಿ, ಖಾಸಗಿ ಉದ್ಯೋಗ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಮುಂದೆ ಬರಬೇಕಾದರೆ ಹಲವು ವರ್ಷಗಳ ನಿರಂತರ ಪ್ರಯತ್ನ ಅಗತ್ಯ. ಇಂದು ಈ ಸಮುದಾಯದ ಅನೇಕ ಯುವಕರು ಶಿಕ್ಷಣ ಪಡೆದು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಿಗೆ ಸೇರುತ್ತಿದ್ದಾರೆ. ಕೆಲವರು ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲೂ ಸಮುದಾಯದ ಮುಖಂಡರು ನಡೆಸುತ್ತಿರುವ ಸಂಘಟನಾತ್ಮಕ ಪ್ರಯತ್ನಗಳು ಇದಕ್ಕೆ ಕಾರಣವಾಗಿವೆ ಎಂದು ಹೇಳಿದರು.
ಸಮುದಾಯದ ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು. ಎಲ್ಲಿ ಹಕ್ಕು ಕಳೆದುಕೊಂಡಿದ್ದೇವೆ, ಅದನ್ನು ಕಾನೂನುಬದ್ಧವಾಗಿ ಹೇಗೆ ಮರಳಿ ಪಡೆಯಬೇಕು, ಸರ್ಕಾರದ ಸೌಲಭ್ಯಗಳನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕು. ಆಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯುವುದರ ಜತೆಗೆ ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿಧ್ಯ, ಉದ್ಯೋಗ ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಿಂದಲೇ ಇಂದು ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಹಕ್ಕು, ಗೌರವ ಹಾಗೂ ಶಿಕ್ಷಣದ ಅವಕಾಶ ದೊರೆತಿದೆ. ಸಂವಿಧಾನ ಇಲ್ಲದಿದ್ದ ಕಾಲದಲ್ಲಿ ಅನೇಕ ಸಮುದಾಯಗಳಿಗೆ ತಮ್ಮ ಹಕ್ಕುಗಳನ್ನು ಪಡೆಯುವ ಅವಕಾಶವೇ ಇರಲಿಲ್ಲ. ಆದರೆ ಸಂವಿಧಾನ ಜಾರಿಯಾದ ನಂತರ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಲಗೊಂಡಿದೆ. ಇಂದು ನಾವು ನೌಕರರಾಗಲು, ಶಾಸಕರಾಗಲು, ಮಾತನಾಡುವ ಹಕ್ಕು ಪಡೆಯಲು ಹಾಗೂ ಭೂಮಿ ಹೊಂದಲು ಸಾಧ್ಯವಾಗಿರುವುದರ ಹಿಂದೆ ಸಂವಿಧಾನದ ರಕ್ಷಣೆ ಇದೆ ಎಂದು ಹೇಳಿದರು.
ನಮ್ಮನ್ನು ರಕ್ಷಣೆ ಮಾಡುವಂತಹ ಯಾವುದಾದರೂ ಗ್ರಂಥ ಅಥವಾ ಕಾನೂನು ಇದ್ದರೆ ಅದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅದು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ದೇಶದ ಎಲ್ಲ ನಾಗರಿಕರಿಗೂ ದಾರಿದೀಪವಾಗಿದೆ. ಸಂವಿಧಾನದ ಆಶಯಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಸಂವಿಧಾನದ ಕೊಡುಗೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಅಂಬೇಡ್ಕರ್ ಅವರ ವಿಚಾರಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಇನ್ನಷ್ಟು ಜನ ಅಂಬೇಡ್ಕರ್ ಅವರ ವಿಚಾರಗಳತ್ತ ಹತ್ತಿರವಾಗಬೇಕು. ಅದೇ ರೀತಿ 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನೂ ಅರ್ಥಮಾಡಿಕೊಳ್ಳಬೇಕು. ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯದ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಎಲ್ಲ ವರ್ಗಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ವಸಂತರಾವ್‌ ಚೌಹಾಣ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶಾಸಕ ಆಸೀಫ್ ಸೇಠ್‌,‌ ಯುವ ನಾಯಕ ರಾಹುಲ್‌ ಜಾರಕಿಹೊಳಿ, ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲ್ಕರ, ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಜಿಲ್ಲಾ ವಾಲ್ಮೀಕಿ ಸಮಾಜ ಅಧ್ಯಕ್ಷ  ರಾಜಶೇಖರ ತಳವಾರ, ಲಕ್ಷಣ ಬಾಮನೆ, ಡಿ.ಎಸ್.‌ ಜಗಮೈನವರ,  ಮುರಘೇಂದ್ರಗೌಡ ಪಾಟೀಲ, ಶಂಕರ ಹೊಳಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಗರದ ಆರ್‌ಟಿಓ ವೃತ್ತದಿಂದ ಸಮ್ಮೇಳನ ಆಯೋಜಿಸಿದ ಕುಮಾರಗಂಧರ್ವ ರಂಗಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ