ಕೊಪ್ಪಳ: ನಗರಸಭೆ ಆವರಣದಲ್ಲಿ ಬಲ್ಡೋಟ ಬಿಎಸ್ಪಿಎಲ್ ಸ್ಥಾಪನೆ ವಿರೋಧಿಸಿ, ಕಾರ್ಖಾನೆಗಳ ಮಾಲಿನ್ಯ ನಿಯಂತ್ರಿಸಿ ಇಲ್ಲವೆ ಬಂದ್ ಮಾಡಿ, ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಸಾರ್ವಜನಿಕರಿಗೆ ಮುಕ್ತಗೊಳಿಸಿ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ) ವತಿಯಿಂದ 294 ದಿನಗಳಿಂದ ಧರಣಿ ನಡೆಸಲಾಗುತ್ತಿದೆ.
"ಗವಿಶ್ರೀಗಳು ಹೇಳಿದ್ದೇನು ಜನಪ್ರತಿನಿಧಿಗಳು ಮಾಡಿದ್ದೇನು" ಎಂದು ಉತ್ತರ ಕೊಡುವಂತೆ ಆಗ್ರಹಿಸಿ ಇದೇ 27.08.2026ರಂದು ಹೋರಾಟ 301ನೇ ದಿನ ತಲುಪುತ್ತಿದ್ದು, ಅಂದು ಕೊಪ್ಪಳ ಜನರ "ಹೋರಾಟದ ನಡೆ ಶಾಸಕರ ಮನೆ ಕಡೆ" ಎನ್ನುವ ಹೋರಾಟ ರೂಪಿಸಲಾಗಿದೆ. ತಪ್ಪದೆ ನಗರದ ನಾಗರಿಕರು, ಬಾಧಿತ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ರಾಜಶೇಖರ ಏಳುಭಾವಿ, ನಿವೃತ್ತ ಪ್ರಾಂಶುಪಾಲ ಬಿ.ಜಿ.ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ವೆಂಕಣ್ಣಾಚಾರ ಕಟ್ಟಿ, ರಮೇಶ ಮೈನಳ್ಳಿ, ಮಹೆಬೂಬ ಗಂಗಾವತಿ, ಜಯಶ್ರೀ ಸಿರಿಗೆರೆ, ಚಂದ್ರು ಕಾತರಕಿ ಮುಂತಾದವರು ಇದ್ದರು.