ಅಥಣಿ : ವಾಯು ಮಾಲಿನ್ಯ ತಡೆಗಟ್ಟುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಕಾಪಾಡಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಅಥಣಿ ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎ. ಹುದ್ದಾರ ಹೇಳಿದರು.
ಅವರು ಬುಧವಾರ ಪಟ್ಟಣದ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಜನಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪೆಟ್ರೋಲ್ ಮತ್ತು ಡಿಸೈಲ್ ಇಂಧನ ಬಳಕೆಯ ವಾಹನಗಳ ಅತಿಯಾದ ಬಳಕೆ, ಕೈಗಾರಿಕೆಗಳು, ಅತಿಯಾದ ಪ್ಲಾಸ್ಟಿಕ್ ಬಳಕೆ ಮತ್ತು ಆಗಾಗ ತ್ಯಾಜ್ಯ ವಸ್ತುಗಳನ್ನು ಸುಡುವುದು ಮತ್ತು ರಾಸಾಯನಿಕ ವಸ್ತುಗಳ ಬಳಕೆಯಿಂದ ಪರಿಸರ ಮತ್ತು ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈಗಾಗಲೇ ಪರಿಸರ ಮಾಲಿನ್ಯದಿಂದ ಸಕಾಲಕ್ಕೆ ಮಳೆಯಾಗದೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಇದರಿಂದ ಜನ ಮತ್ತು ಜಾನುವಾರ, ಪಕ್ಷಿ ಸಂಕುಲಗಳಿಗೂ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಅಥಣಿ ಪ್ರಾದೇಶಿಕ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಥಣಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಂಜುನಾಥ ಶಿರಾಳೆ ಮಾತನಾಡಿ ವಾಹನ ಸವಾರರು ತಮ್ಮ ವಾಹನಗಳನ್ನು ಸಮಯಕ್ಕೆ ಸರಿಯಾಗಿ ಸುಸ್ತಿತಿಯಲ್ಲಿ ಇಟ್ಟುಕೊಂಡು ವಾಯು ಮಾಲಿನ್ಯ ತಡೆಗೆ ಸಹಕರಿಸಬೇಕು. ವಾಯು ಮಾಲಿನ್ಯ ಹೆಚ್ಚಾದರೆ ಅದು ಪರಿಸರದ ಮೇಲೆ ದುಪ್ಪರಿಣಾಮ ಬೀರುತ್ತದೆ. ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತದೆ. ಈಗಾಗಲೇ ಜಾಗತಿಕ ತಾಪಮಾನ ಹೆಚ್ಚಾಗಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲ ಎದುರಿಸುತ್ತಿದ್ದೇವೆ. ಇದನ್ನು ತಡೆಗಟ್ಟಬೇಕಾದರೆ ವಾಯು ಮಾಲಿನ್ಯ ತಡೆ ಅವಶ್ಯವಾಗಿದೆ ಎಂದರು.
ಮೋಟಾರು ವಾಹನ ಹಿರಿಯ ನಿರೀಕ್ಷಕ ಶಿವಾನಂದ ಗುಡ್ಡೋಡಗಿ ಮಾತನಾಡಿ ಅತಿಯಾದ ವಾಹನಗಳ ಬಳಕೆಯಿಂದ ಪರಿಸರ ಮತ್ತು ವಾಯು ಮಾಲಿನ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಇಲಾಖೆಯಿಂದ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದೇವೆ. ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಲ್ಲಿಯೂ ಕೂಡ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
ತಾಲೂಕ ಆರೋಗ್ಯ ಅಧಿಕಾರಿ ಡಾ. ಬಸಗೌಡ ಕಾಗೆ, ಐಎಂಎ ಅಧ್ಯಕ್ಷೆ ಡಾ. ಸ್ಮಿತಾ ಚೌಗಲಾ, ಪ್ರಾದೇಶಿಕ ಸಾರಿಗೆ ಕಚೇರಿಯ ಪರೀಕ್ಷಕ ಶ್ರೀರಂಗ ಜೋಶಿ ಮಾತನಾಡಿ ವಾಯು ಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಆದ್ದರಿಂದ ಹೆಚ್ಚು ಗಿಡ ಮರ ಬೆಳೆಸಿ ಪರಿಸರವನ್ನು ಕಾಪಾಡುವ ಮೂಲಕ ವಾಯು ಮಾಲಿನ್ಯ ತಡೆಗಟ್ಟಬೇಕು. ದಿನನಿತ್ಯ ಸೈಕಲ್ ಬಳಸುವುದರಿಂದ ವಾಯು ಮಾಲಿನ್ಯ ತಡೆಗಟ್ಟುವದರ ಜೊತೆಗೆ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ವಾಹನಗಳನ್ನು ಬಳಸುವಂತೆ ಸಲಹೆ ನೀಡಿದರು.
ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಿಂದ ಆರಂಭವಾದ ಜನ ಜಾಗೃತಿ ಸೈಕಲ್ ಜಾಥಾ ಪಟ್ಟಣದ ಬಸವೇಶ್ವರ ವೃತ್ತ, ಶಿವಯೋಗಿ ವೃತ್ತ, ಚೆನ್ನಮ್ಮ ವೃತ್ತ, ಡಾ.ಬಿ ಆರ್ ಅಂಬೇಡ್ಕರ್ ವೃತ್ತದ ಮೂಲಕ ಹಾಯ್ದು ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರೋಪಗೊಂಡಿತು. ಈ ಸೈಕಲ್ ಜಾಥಾದಲ್ಲಿ ಪಟ್ಟಣದ ಸಾನ್ವಿ ಮೋಟಾರ್ ವಾಹನ ತರಬೇತಿ ಕೇಂದ್ರ, ರೇಣುಕಾ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸುಮಿತಕುಮಾರ್ ಉಮರಾಣಿ, ಡಾ. ಮಹೇಶ್ ಕಾಪ್ಸೆ, ಡಾ. ಆನಂದ್ ಗುಂಜಿಗಾವಿ, ಉದಯ ಮಾಕಾಣಿ, ಮಲ್ಲು ಇಂಚಲಕರಂಜಿ, ರಂಜಾನ ನದಾಫ್, ಸಿದ್ದು ಹಂಡಗಿ, ಜಗನ್ನಾಥ ಬಾಮನಿ, ರಾಕೇಶ್ ಮೈಗೂರ, ಸಿದ್ದಪ್ಪ ಕಾಮಣ್ಣವರ ,ಮುರಗೇಪ್ಪ ಮೋಟಗಿ,ಸುಭಾಷ ಬುರ್ಲಿ, ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.