ಕಾಗವಾಡ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜೆಎಂಎಫ್‌ಸಿ ನ್ಯಾಯಾಧೀಶೆ ರೂಪಾ ಚಿನಿವಾರ ಹಾಗೂ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರು ಆ.25ರಂದು ಆಕಸ್ಮಿಕ ಭೇಟಿ ನೀಡಿ, ಆಸ್ಪತ್ರೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ದೊರೆಯುತ್ತಿರುವ ಆರೋಗ್ಯ ಸೇವೆಗಳ ಕುರಿತು ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯ ಸ್ವಚ್ಛತೆ, ಔಷಧೋಪಚಾರ, ವೈದ್ಯಕೀಯ ಸಿಬ್ಬಂದಿಯ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರಿಂದ ಆರೋಗ್ಯ ಕೇಂದ್ರದ ಕಾರ್ಯವೈಖರಿ ಮತ್ತು ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಗ್ರೇಡ್–2 ತಹಸೀಲ್ದಾರ ರಶ್ಮಿ ಜಕಾತಿ, ಡಾ. ಶ್ರೀರಂಗ ಕೋಳಿ, ಶಾಫಿಕ್ ಮುಲ್ಲಾ, ಸಚಿನ್ ಜಾಧವ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.