ಎಂ.ಕೆ. ಹುಬ್ಬಳ್ಳಿ : ಬೆಳಗಾವಿ ಜಿಲ್ಲಾ ಕಲಾವಿದರ ಒಕ್ಕೂಟ ಹಾಗೂ ಐಸಿರಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಚಿತ್ರಕಲಾವಿದರಿಗಾಗಿ ಕುಂಚದೊಂದಿಗೆ ಹೊಸ ಪಯಣ ಎಂಬ ವಿಶೇಷ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿರಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಕುಮಾರ ಬ್ಯಾಕೂಡ ಮಾತನಾಡಿ, ಚಿತ್ರಕಲಾವಿದರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಚಿತ್ರಕಲಾವಿದರು ತಮ್ಮ ಕಲಾ ಪ್ರತಿಭೆಯೊಂದಿಗೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮರ್ಪಕ ಕಾರ್ಯಯೋಜನೆ ರೂಪಿಸಬೇಕು. ಎಲ್ಲ ಚಿತ್ರಕಲಾವಿದರು ಒಗ್ಗಟ್ಟಿನಿಂದ ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಸರ್ಕಾರವು ಕಲಾವಿದರಿಗಾಗಿ ರೂಪಿಸಿರುವ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಆರ್ಥಿಕ ನೆರವುಗಳು ಅರ್ಹ ಕಲಾವಿದರಿಗೆ ತಲುಪುವಂತೆ ಸಂಘಟಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ವಿಶೇಷವಾಗಿ ಯುವ ಚಿತ್ರಕಲಾವಿದರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ತರಬೇತಿ, ಪ್ರೋತ್ಸಾಹ, ಕಲಾ ಪ್ರದರ್ಶನಗಳಿಗೆ ಅವಕಾಶ ಹಾಗೂ ಆರ್ಥಿಕ ಬೆಂಬಲ ದೊರಕುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದು ಅನಂತಕುಮಾರ ಬ್ಯಾಕೂಡ ಹೇಳಿದರು.
ಅದೇ ರೀತಿ, 50 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರ ಕಲಾ ಸೇವೆಯನ್ನು ಗುರುತಿಸಿ, ಅವರು ತಮ್ಮ ಅನುಭವ ಮತ್ತು ಪ್ರತಿಭೆಯನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರದಿಂದ ಪ್ರೋತ್ಸಾಹಧನ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಹಿರಿಯ ಕಲಾವಿದರಿಗೆ ಮಾಸಿಕ ನೆರವು, ಕಲಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಹಾಗೂ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ವಿಶೇಷ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಕಲಾ ಸೇವೆಗೆ ಗೌರವ ನೀಡಬೇಕು ಎಂದರು.
ಚಿತ್ರಕಲೆ ಕೇವಲ ಕಲೆಯಾಗಿ ಉಳಿಯದೆ, ಕಲಾವಿದರ ಜೀವನೋಪಾಯಕ್ಕೂ ದಾರಿಯಾಗಬೇಕು. ಕಲಾವಿದರ ಪ್ರತಿಭೆಗೆ ಸೂಕ್ತ ಮಾರುಕಟ್ಟೆ ಮತ್ತು ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
“ಒಗ್ಗಟ್ಟಿನ ಸಂಘಟನೆ, ಸರ್ಕಾರದ ಯೋಜನೆಗಳ ಸದ್ಬಳಕೆ, ಯುವ ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಹಿರಿಯ ಕಲಾವಿದರಿಗೆ ಪ್ರೋತ್ಸಾಹಧನ—ಇವುಗಳ ಮೂಲಕ ಚಿತ್ರಕಲಾ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಬಹುದು” ಎಂಬ ಆಶಯ ಈ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಚಿತ್ರಕಲಾವಿದರ ಸಾಮಾಜಿಕ, ಆರ್ಥಿಕ ಹಾಗೂ ವೃತ್ತಿಪರ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು
ಚಿತ್ರಕಲಾವಿದರ ಸಂಘಟನೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲು ಅಕ್ಟೋಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಶ್ರೀ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಕಲಾವಿದರು ಭಾಗವಹಿಸುವಂತೆ ಕಾರ್ಯಕ್ರಮದ ಸಂಘಟಕರು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲಾವಿದರಾದ ವಿಶ್ವನಾಥ ಗುಗ್ಗರಿ,ನಾಗೇಶ ಚೀಮರೋಲ,ಬಾಬಾಸಾಹೇಬ ಸದಲಗೆ, ಮೀನಾಕ್ಷಿ ಸದಲಗೆ, ಸಂಜೀವಕುಮಾರ ತಿಲಗರ, ಯೂನುಸ ಡೋಣಿ, ಬಸವರಾಜ ಗುಡಸಲಮನಿ,ಉದಯ ಬಡಿಗೇರ,ಸುಶೀಲ ತರಬರ, ಕಾಶವ್ವಾ ವಾಲಿ, ರೆಹಮತುಲ್ಲಾ ಶಿಂದೋಲಕರ, ವಿನಾಯಕ ಧರೆಪ್ಪನ್ನವರ, ವಿರೂಪಾಕ್ಷಿ ಕಲ್ಲೂರ, ಅನಿಲ ಕಮ್ಮಾರ, ಶಾಂತಾ ಕಮ್ಮಾರ , ನಿಜಗುಣಿ ಮಠದ, ಮಹಾಂತೇ ಟೋನ್ನೆಣ್ಣವರ , ಸೋಮಪ್ಪ ಕಲಬಾವಿ, ನಾಗಲಿಂಗ ಕಡ್ಲಾಸ್ಕರ, ಮಹಾಂತೇಶ ಚಿಕ್ಕಮಠ, ಬಸವರಾಜ ಬಡಿಗೇರ , ಸಂಗನಗೌಡ ಪಾಟೀಲ, ಮಡಿವಾಳಪ್ಪ ಕಾಡಪ್ಪನವರ , ಪ್ರಧಾನಂದ ಸುಂಕದ, ದಯಾನಂದ ಬಡಿಗೇರ, ಆನಂದ ಬಡಿಗೇರ ,ಸೇರಿದಂತೆ ಹಲವು ಚಿತ್ರಕಲಾವಿದರು ಭಾಗವಹಿಸಿದ್ದರು.