ಬಳ್ಳಾರಿ: 31:ಕಲಿಯುಗದ ಕಲ್ಪವೃಕ್ಷ, ಕಾಮಧೇನು, ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀರಾಘವೇಂದ್ರ ಸ್ವಾಮಿಗಳ ಶ್ರೀಮಠದಲ್ಲಿ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಸತ್ಯನಾರಾಯಣಪೇಟೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀಮಠ, ತೇರು ಬೀದಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಸಿರುಗುಪ್ಪ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ರಾಯಲ್ ಕಾಲೋನಿಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ ನಾನಾ ಕಡೆ ಸೋಮವಾರ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪೂರ್ವಾರ್ಧನೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಸತ್ಯನಾರಾಯಣಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳ್ಳಂ ಬೆಳಿಗ್ಗೆ ಪಂ.ಪ್ರಸನ್ನಾಚಾರ ಐ.ಜಿ.ಅವರ ನೇತೃತ್ವದಲ್ಲಿ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ವೇದ ಪಾರಾಯಣ, ವಿಶೇಷ ಪಂಚಾಮೃತಾಭಿಷೇಕ, ಕನಕ ಮಹಾಪೂಜೆ, ಅರ್ಚನೆ, ನೈವೇದ್ಯ, ವಿಶೇಷ ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಸಂಜೆ ಉತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಗರವೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಗುರುರಾಯರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಮೂಹಿಕ ಭಜನೆ, ಕೋಲಾಟ, ಗಮನಸೆಳೆಯಿತು. ಆರಾಧನಾ ಮಹೋತ್ಸವ ಹಿನ್ನೆಲೆ ಶ್ರೀಮಠಕ್ಕೆ ವಿವಿಧ ಬಣ್ಣ ಬಣ್ಣಗಳ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.