ಮಹಾಲಿಂಗಪುರ, ಜೂ. ೨೬ : ರಾಜ್ಯದ ಉಪ್ಪಾರ ಸಮಾಜಕ್ಕೆ ಸಮರ್ಪಕ ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ ಜನಪ್ರಿಯ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ರಬಕವಿ-ಬನಹಟ್ಟಿ ತಾಲೂಕಿನ ಉಪ್ಪಾರ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಸಮೀಪದ ಕೆಸರಗೊಪ್ಪ ಗ್ರಾಮದ ಭಗೀರಥ ಉಪ್ಪಾರ ಸಮಾಜದ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಉಪ್ಪಾರ ಸಮಾಜದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಈ ಮನವಿಯನ್ನು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರ ಮೂಲಕ ಸರ್ಕಾರಕ್ಕೆ ರವಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು, ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಸತತ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಜನರ ಅಪಾರ ವಿಶ್ವಾಸ ಗಳಿಸಿರುವ ನಾಯಕರಾಗಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಗ್ರಾಮೀಣ ಮಟ್ಟದಲ್ಲಿ ಬಲಪಡಿಸುವಲ್ಲಿ ಪುಟ್ಟರಂಗಶೆಟ್ಟಿ ಅವರ ಪಾತ್ರ ಮಹತ್ವದ್ದಾಗಿದೆ. ಪಕ್ಷದ ಸಂಘಟನೆಗೆ ಶ್ರಮಿಸಿ, ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಸರ್ಕಾರಕ್ಕೂ ಹಾಗೂ ಪಕ್ಷಕ್ಕೂ ಮತ್ತಷ್ಟು ಬಲ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಉಪ್ಪಾರ ಸಮಾಜವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದ್ದು, ಸಮಾಜದ ಏಳಿಗೆಗಾಗಿ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಅತ್ಯಗತ್ಯವಾಗಿದೆ. ಸಚಿವ ಸಂಪುಟದಲ್ಲಿ ಉಪ್ಪಾರ ಸಮಾಜಕ್ಕೆ ಅವಕಾಶ ನೀಡುವುದರಿಂದ ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದ್ದು, ಯುವಜನರಲ್ಲಿ ಆತ್ಮವಿಶ್ವಾಸ ಮೂಡಲಿದೆ ಎಂದು ಮುಖಂಡರು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳ ಉಪ್ಪಾರ ಸಮಾಜದ ಜನರು ಪುಟ್ಟರಂಗಶೆಟ್ಟಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದು, ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜದ ಭಾವನೆಗಳಿಗೆ ಗೌರವ ಸಲ್ಲಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಪರಪ್ಪ ಬ್ಯಾಕೋಡ, ದುಂಡಪ್ಪ ಜಾಧವ, ಕರೆಪ್ಪ ಬ್ಯಾಕೋಡ, ಭೀಮಪ್ಪ ಸಸಾಲಟ್ಟಿ, ವಿಠ್ಠಲ ಹೆಗ್ಗನ್ನವರ, ಹಣ್ಮಂತ ಬ್ಯಾಕೋಡ, ಎಂ.ಎಸ್. ಬ್ಯಾಕೋಡ, ಜ್ಯೋತೆಪ್ಪ ಕಪರಟ್ಟಿ, ಭೀಮಶಿ ಪೂಜಾರಿ, ಮಲ್ಲಪ್ಪ ಬ್ಯಾಕೋಡ, ಎಸ್.ಪಿ. ಕೊಡಗಾನೂರ, ವಿ.ಆರ್. ಸರವಿ, ಎಚ್.ಎಂ. ಬ್ಯಾಕೋಡ, ಎಂ.ಬಿ. ಲಾತೂರ, ಬಿ.ಎಲ್. ಬ್ಯಾಕೋಡ, ಶ್ರೀಶೈಲ ಅಡಿಹುಡಿ, ಈರಪ್ಪ ಬ್ಯಾಕೋಡ, ಎಂ.ಬಿ. ಕಲ್ಲಟ್ಟಿ, ಎಂ.ಎಲ್. ತೇಜಪ್ಪಗೋಳ, ಎಸ್.ಎಂ. ಉಸಳಿ ಸೇರಿದಂತೆ ಸಮಾಜದ ನೂರಾರು ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
