ಬೆಂಗಳೂರು: ಆಕ್ಷೇಪಾರ್ಹ ಟ್ವೀಟ್ ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಿಜೆಪಿಯ ಐಟಿ ಸೆಲ್ ವಿಭಾಗದ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ 7 ದಿನಗಳ ಒಳಗೆ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಕರ್ನಾಟಕದ ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಲಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಹೆಸರಿನ ಮೊಟ್ಟೆಗಳಿರುವ ಗೂಡಿನಲ್ಲಿ ಮುಸ್ಲಿಂ ಹೆಸರಿನ ಮೊಟ್ಟೆ ತಂದಿಟ್ಟು ಪೋಷಿಸುವಂತೆ, ಅದೇ ಮುಸ್ಲಿಂ ಹೆಸರಿನ ಮೊಟ್ಟೆಯಿಂದ ಹೊರಬಂದ ಮರಿ ಕೊನೆಗೆ ಇತರ ಹಕ್ಕಿಗಳನ್ನು ಓಡಿಸುತ್ತಿರುವಂತೆ ಸೂಚಿಸುವ ಕಾರ್ಟೂನ್ ವಿಡಿಯೋವೊಂದನ್ನು ಮೇ 4ರಂದು ಬಿಜೆಪಿ ಹಂಚಿಕೊಂಡಿತ್ತು.
ಈ ವಿವಾದಿತ ಪೋಸ್ಟ್ ವಿರುದ್ಧ ಕೆಪಿಸಿಸಿಯ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ದೂರು ನೀಡಿದ್ದರು. ಇದರನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಜೆ.ಪಿ. ನಡ್ಡಾ, ವಿಜಯೇಂದ್ರ, ಅಮಿತ್ ಮಾಳವೀಯ ಅವರಿಗೆ ಮೇ 6ರಂದು ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.