ಇಂಡಿ: ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವುದು ಕಾನೂನುಬಾಹಿರವಾಗಿದೆ, ತಪ್ಪಿತಸ್ಥರಿಗೆ ೨೦,೦೦೦ ಸಾವಿರ ರೂ. ದಿಂದ ೫೦ ಸಾವಿರ ರೂ ವರೆಗೆ ದಂಡ ಹಾಗೂ ೨ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕರು ಡಿ.ಎಮ್.ದೇವರಮನಿ ಎಚ್ಚರಿಕೆ ನೀಡಿದ್ದಾರೆ.ಬಾಲ ಕಾರ್ಮಿಕ ಕಾಯ್ದೆ ೧೯೮೬ ತಿದ್ದುಪಡಿ ೨೦೧೬ ಸದರಿ ಕಾಯ್ದೆಯಡಿ ಬುಧವಾರ ವಿವಿಧ ಅಂಗಡಿ ಮತ್ತು ಸಂಸ್ಥೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಯಿತು. ದಾಳಿ ವೇಳೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಬಾಲ ಕಾರ್ಮಿಕ ಕಾಯ್ದೆ ಕುರಿತು ಬಿತ್ತಿ ಪತ್ರಗಳನ್ನು ಹಂಚಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ನಿರೀಕ್ಷಕರು ಅವರು೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸದಲ್ಲಿ ನೇಮಿಸುವುದು ಸಂಪೂರ್ಣ ನಿಷೇಧಿಸಲಾಗಿದೆ. ೧೪ ರಿಂದ ೧೮ ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಗಳಲ್ಲಿ ನೇಮಿಸುವುದು ಕಾನೂನುಬಾಹಿರವಾಗಿದೆ, ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಾಳಿಯಲ್ಲಿ ಆರೋಗ್ಯಾಧಿಕಾರಿಗಳಾದ ಡಾ.ರವಿ, ವಿ. ಭತಗುಣಕಿ , ಪೊಲೀಸ್ ಸಿಬ್ಬಂದಿಯಾದ ಬಿ.ಟಿ ಬಸರಗಿ ಹಾಗೂ ರೇಷ್ಮೇ ಇಲಾಖೆಯ ಬಿ.ಬಿ ಡೊಣ್ಣೂರ ಕೃಷಿ ಇಲಾಖೆಯ ಎಸ್.ಎಸ್. ಗುರುಬೆಟ್ಟ ಶಿಕ್ಷಣ ಇಲಾಖೆಯ ಎ.ಸಿ ಹುಣಸಗಿ
ಸಮಾಜ ಕಲ್ಯಾಣ ಇಲಾಖೆಯ ಎಸ್. ಎಚ್ ಜುಮನಾಳ ಶಿಶು ಅಭಿವೃದ್ಧಿ ಇಲಾಖೆ ಸುಧಾಕರ
ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ನೀಲಮ್ಮಾ ಖೇಡಗಿ ಉಪಸ್ಥಿತರಿದ್ದರು.
ಬಾಲಕಾರ್ಮಿಕತೆ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ, ಎಲ್ಲಿಯಾದರೂ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿರುವುದು ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


