ಬಳ್ಳಾರಿ, ಏ.15: ಬರುವ 2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಯಾಗಿ, ನಾರಿಶಕ್ತಿ ಸಂಸತ್ತಿನಲ್ಲಿ ಶಕ್ತಿಯುತವಾಗಿ ಪ್ರತಿನಿಧಿಸಲಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಇತಿಹಾಸಾತ್ಮಕ ಬೆಳವಣಿಗೆ ಎಂದರು.
“ಮಹಿಳಾ ಮೀಸಲಾತಿ ಮಸೂದೆ ಹಲವು ವರ್ಷಗಳಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಸ್ತಾಪವಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಇದನ್ನು ಜಾರಿಗೆ ತರುವ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ 2029ರೊಳಗೆ ಮಹಿಳೆಯರಿಗೆ ಶೇ 33ರಷ್ಟು ಪ್ರತಿನಿಧಿತ್ವ ದೊರೆಯುವುದು ಖಚಿತ” ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಮಹಿಳಾ ಸದಸ್ಯರ ಪ್ರಮಾಣ ಕೇವಲ ಶೇ 4ರಷ್ಟಿತ್ತು. ಬಸವರಾಜೇಶ್ವರಿ, ನಾಗಮ್ಮ ಕೇಶವಮೂರ್ತಿ ಮೊದಲಾದ ನಾಯಕರಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. 2019ರ ವೇಳೆಗೆ ಮಹಿಳಾ ಸದಸ್ಯರ ಪ್ರಮಾಣ ಶೇ 15ರಷ್ಟು ಏರಿಕೆಯಾಗಿದೆ ಎಂದು ಅವರು ವಿವರಿಸಿದರು.
ಮಹಿಳಾ ಮೀಸಲಾತಿ ವಿಚಾರಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿರೋಧ ಪಕ್ಷಗಳ ಆಕ್ಷೇಪಗಳ ನಡುವೆಯೂ ಎನ್‌ಡಿಎ ಸರ್ಕಾರ ಇದನ್ನು ಜಾರಿಗೆ ತರುವ ಬದ್ಧತೆಯಿದೆ. 2029ರ ಚುನಾವಣೆಯ ವೇಳೆಗೆ ಮಹಿಳೆಯರು ತಮ್ಮ ಹಕ್ಕಿನ ಮೀಸಲಾತಿ ಅನುಭವಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಮಹಿಳಾ ಸಬಲೀಕರಣದ ದೃಷ್ಠಿಯಿಂದ ‘ಡ್ರೋಣ್ ದೀದಿ’, ‘ಮುದ್ರಾ’ ಯೋಜನೆಗಳಂತಹ ವಿವಿಧ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರ ಮೂಲಕ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿಶಾಲಿಗಳಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಸುಧಾ, ವಿಜಯಲಕ್ಷ್ಮಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಹಂಪಿ ರಮಣ, ಮುಖಂಡರಾದ ಡಾ. ಅರುಣಾ ಕಾಮಿನೇನಿ, ಡಾ. ರೇಣುಕಾ ಮಂಜುನಾಥ, ಅಲುವೇಲು, ಸಾಧನಾ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.


