ರಾಮದುರ್ಗ: ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಸರಕಾರಿ ನೌಕರರಿಗೆ ಕಛೇರಿಯಲ್ಲಿ ಸಧ್ಯ ಇರುವ ಕೆಲಸದ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಕಛೇರಿ ಅವಧಿಯನ್ನು ಬದಲಾವಣೆ ಮಾಡಿ, ಬೆಳಗಿನ ಸಮಯ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ರಾಜ್ಯ ನೌಕರರ ಸಂಘದ ತಾಲೂಕಾ ಘಟಕದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಬಿಸಿಲ ಅವಧಿಯಲ್ಲಿ ಕೆಲಸ ಮಾಡಲು ತೊಂದರೆ ಆಗಿದೆ. ಜನತೆಗೂ ಸಹ ಕಛೇರಿಗೆ ಬರಲು ತೊಂದರೆ ಆಗುತ್ತಿದೆ. ಕೂಡಲೇ ಬೇಸಿಗೆ ಮುಗಿಯುವ ವರೆಗೆ ಕಛೇರಿ ಅವಧಿಯನ್ನು ಬದಲಾವಣೆ ಮಾಡಿಕೊಡಬೇಕು ಎಂದು ಅವರು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಮ್ಮ ಮನವಿಯನ್ನು ಪರಿಶೀಲಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೌಕರರ ತಾಲೂಕಾಧ್ಯಕ್ಷ ಐ.ವೈ. ಪವಾಡಿಗೌಡ್ರ, ಕಾರ್ಯದರ್ಶಿ ಎಂ.ಎಸ್ ಜಂಗವಾಡ. ಹಿರಿಯ ಉಪಾಧ್ಯಕ್ಷ ಅಶೋಕ ಹುಣಸಿಕಟ್ಟಿ, ಲೊಕೇಶ ಚೌಹಾನ್, ಶ್ರೀಕಾಂತ್ ಗುರ್ಲಹೊಸೂರ, ಎಂ.ಕೆ. ಹಂಪಿಹೊಳಿ, ಸಂತೋಷ ಭಜಂತ್ರಿ, ಪಿಡಿಓ ವಿಜಯ್‌ಕುಮಾರ್ ವಣಿಕ್ಯಾಳ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಿಸಿಲಿನ ತಾಪ ಹೆಚ್ಚಳ : ಕಛೇರಿ ಅವಧಿಯನ್ನು ಬದಲಾವಣೆ ಮಾಡಲು ಆಗ್ರಹಿಸಿ ಮನವಿ


