ಬೆಂಗಳೂರು, ಜೂನ್ 26: ಹನಿಟ್ರ್ಯಾಪ್ ಮೂಲಕ ಕಾಂಗ್ರೆಸ್ ಶಾಸಕ ಹರಿಶ್ಗೌಡ್ ಅವರಿಗೆ ಬ್ಲ್ಯಾಕ್ಮೇಲ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಬಂಧಿತ ಆರೋಪಿಗಳು. ಆರೋಪಿಗಳ ಗ್ಯಾಂಗ್ ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ಗೌಡ ಅವರ ವಿರುದ್ಧವೇ ಸುಳ್ಳು ಹನಿಟ್ರ್ಯಾಪ್ ಮಾದರಿ ವಿಡಿಯೋ ಸೃಷ್ಟಿಸಿ ಬೆದರಿಕೆ ಹಾಕಲು ಮುಂದಾಗಿದ್ದರು. ಅಲ್ಲದೆ, ಕೋಟ್ಯಂತರ ರೂ. ಹಣ ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿದ್ದರು. ಬಳಿಕ ಕಾಂಗ್ರೆಸ್ ಶಾಸಕ ಹರೀಶ್ಗೌಡ ಬೆಂಗಳೂರಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶಾಸಕರು ನೀಡಿದ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಜಾಲವನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣಗೆ ಒಳಪಡಿಸಿದಾಗ ಹಲವು ವಿಚಾರ ಬೆಳಕಿಗೆ ಬಂದಿದೆ. ಹನಿಟ್ರ್ಯಾಪ್ ಗ್ಯಾಂಗ್ನಲ್ಲಿ ಓರ್ವ ಯುವತಿ ಸಹ ಇರುವ ಬಗ್ಗೆ ಮಾಹಿತಿ ದೊರೆತಿದೆ.
ಆರೋಪಿಗಳು ರಾಜ್ಯದಲ್ಲಿನ ಪ್ರಭಾವಿಗಳ ಸಂಪರ್ಕ ಮಾಡಿ ಅವರನ್ನು ಫಾಲೀ ಮಾಡುತ್ತಿದ್ದರು. ಬಳಿಕ ವಿಐಪಿಗಳನ್ನು ಭೇಟಿ ಮಾಡಿ ನಂಬರ್ ಪಡೆದುಕೊಳ್ಳುತ್ತಿದ್ದಾರು. ನಂತರ, ಆರೋಪಿಗಳು ವಿಐಪಿಗಳ ಚಲನವಲನದ ಮೇಲೆ ಕಣ್ಣಿಡುತ್ತಿದ್ದರು. ಬಳಿಕ, ವಿಐಪಿಗಳು ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್ಗಳ ರೂಮು ಬುಕ್ಕಿಂಗ್, ಚೆಕ್-ಇನ್ ಹಾಗೂ ಚೆಕ್-ಔಟ್ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.\
ಬಳಿಕ, ವಿಐಪಿಗಳು ಹೋಟೆಲ್ನ ರೂಮ್ ಖಾಲಿ ಮಾಡಿಕೊಂಡು ಹೋದ ನಂತರ ಅವರು ಉಳಿದುಕೊಂಡಿದ್ದ ರೂಮ್ ಅನ್ನು ಬಾಡಿಗೆ ಪಡೆದು ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಈ ರೂಮಿನಲ್ಲಿ ಯುವತಿ ಬಳಸಿಕೊಂಡು ಹಿಡಿನ್ ಕ್ಯಾಮೆರಾ ಇಟ್ಟಿರುವ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು.
ಬಳಿಕ ವಿಐಪಿ ಈ ಯುವತಿಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೋ ಕ್ರಿಯೇಟ್ ಮಾಡಿ ಅದನ್ನು ವಿಐಪಿಗಳಿಗೆ ಕಳುಹಿಸಿ, ಹಣ್ಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹಾಗೂ ಪೊಲೀಸರಿಗೆ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಇದೇ ರೀತಿ ಕಾಂಗ್ರೆಸ್ ಶಾಸಕ ಹರೀಶ್ಗೌಡ ಅವರಿಗೂ ಮಾಡಿದ್ದು, ಕೂಡಲೆ ಶಾಸಕರು ದೂರು ನೀಡಿದ್ದಾರೆ. ಇದೀಗ ಆರೋಪಿಗಳು ಲಾಕ್ ಆಗಿದ್ದಾರೆ.