ಅಥಣಿ: ಪಟ್ಟಣದ ಹೊರವಲಯದ ಮಲ್ಲಟ್ಟಿಕೋಡಿ ಸಂಗೊಳ್ಳಿ ರಾಯಣ್ಣ ನಗರದಲ್ಲಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ ಶ್ರೀ ಬಾಳು ಮಾಮಾ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಕಳಸಾರೋಹಣ ಸಮಾರಂಭವನ್ನು ಬರುವ ದಿ. 30 ರಂದು ಮುಂಜಾನೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ವಿಠ್ಠಲ ತಟ್ರೆ ಹೇಳಿದರು.
ಅವರು ಸೋಮವಾರ ಅಥಣಿ ಪಟ್ಟಣದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಬಾಳು ಮಾಮಾ ಅವರು ಸಹಾಯ ಕೇಳಿ ಬಂದವರನ್ನು ಉದ್ದರಿಸಿದ್ದಾರೆ. ಅನೇಕ ಪವಾಡಗಳನ್ನು ಮಾಡಿರುವ ಅವರನ್ನು ಜನರು ಶಿವನ ಅವತಾರ, ಪವಾಡ ಪುರುಷ ಎಂದು ಕರೆದಿದ್ದಾರೆ. ಕನ್ನಡ ನಾಡಿನಲ್ಲಿ ಜನಿಸಿ ಮಹಾರಾಷ್ಟ್ರ ರಾಜ್ಯದಲ್ಲಿ ದೇಹ ತ್ಯಾಗ ಮಾಡಿದ ಅವರು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ್ದಾರೆ. ಅವರ ಮೇಲಿನ ಶ್ರದ್ದೆ ಮತ್ತು ಭಕ್ತಿಯಿಂದ ಮಲ್ಲಟ್ಟಿಖೋಡಿ ಭಕ್ತರೆಲ್ಲ ಸೇರಿಕೊಂಡು ಬಾಳು ಮಾಮಾ ದೇವಸ್ಥಾನ ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿ ಅವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ರವಿವಾರ ಅತೀ ವಿಜೃಂಭಣೆಯಿಂದ ಜರುಗಲಿದೆ ಎಂದರು.
ಕಲಾವಿದ ಸುರೇಶ್ ವಾಘಮೋಡೆ ಮಾತನಾಡಿ ರವಿವಾರ ಮುಂಜಾನೆ 8 ಗಂಟೆಗೆ ಅಥಣಿ ಪಟ್ಟಣದ ದಡ್ಡಿಸಿದ್ದೇಶ್ವರ ದೇವಸ್ಥಾನದಿಂದ ಮೂರ್ತಿ ಮೆರವಣಿಗೆ ಜರುಗಲಿದೆ. ಈ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳಗಳು, ಮಹಿಳೆಯರು ಕುಂಬ ಮೇಳ, ಹೆಸರಾಂತ ಗದಗ ಜಿಲ್ಲೆಯ ಕೊಣ್ಣೂರ ಗ್ರಾಮದ ಮಹಿಳಾ ಡೊಳ್ಳು ಕುಣಿತ ಸಂಘ ಹಾಗೂ ಪ್ರಸಿದ್ದ ಬ್ಯಾಂಜೋ ಮತ್ತು ಬಡಚಿ ಗ್ರಾಮದ ಲೇಜಿಮ ಮೇಳ, ಅಥಣಿ ನಗರದ ಶ್ರೀ ದಡ್ಡಿಸಿದ್ದೇಶ್ವರ ಕೈ ಪೆಟ್ಟು ಮೇಳ ಇವರಿಂದ ಮೆರವಣಿಗೆ ಜರುಗಲಿದೆ. ಮುಂಜಾನೆ ಒಂಬತ್ತು ಗಂಟೆಗೆ ದೇವಸ್ಥಾನದ ಕಳಸಾರೋಹಣ ಸಮಾರಂಭ ಜರುಗಲಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ, ಅಥಣಿಯ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ಕವಲಗುಡ್ಡ ಹಣಮಾಪುರದ ಅಮರೇಶ್ವರ ಮಹಾರಾಜರು, ಶಶಿಕಾಂತ ಗುರೂಜಿ, ಮಾಳಿಂಗರಾಯ ಮಹಾರಾಜರು, ಸದಾಶಿವ ಅಜ್ಜನವರು ಸೇರಿದಂತೆ ಅನೇಕ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಸಂಪ್ರದಾಯದಂತೆ ಭಜನೆ ಮತ್ತು ಕೀರ್ತನೆ ಕಾರ್ಯಕ್ರಮಗಳು ಜರುಗಲಿವೆ, ಮಧ್ಯಾಹ್ನ ಸ್ವರಸಂಗಮ ಕಲಾ ಬಳಗದಿಂದ ಸಂಗೀತ ರಸಮಂಜರಿ ಜರುಗಲಿದೆ. ಸದ್ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಾಳು ಮಾಮಾ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಉದ್ದಪ್ಪಾ ತೆಟ್ರಗೋಳ, ಕಲ್ಲಪ್ಪಾ ಮೈತ್ರಿ, ಭರಮ್ಮಾ ಮಾಕಾಣಿ, ಲಕ್ಕಪ್ಪಾ ಯಕ್ಕಂಚಿ, ಹಣಮಂತ ಮಾಕಾನಿ, ಮುರುಗೇಪ್ಪ ಮೈತ್ರಿ, ವಿಠ್ಠಲ ಪೂಜಾರಿ, ಶಂಕರ ಲಂಗೋಟ್ಟಿ, ಅಪ್ಪು ಪೂಜಾರಿ, ಸುರೇಶ ವಾಘಮೋಡೆ, ಮುತ್ತಪ್ಪ ಕುಡಚಿ, ಚನ್ನಗೌಡ ಪಾಟೀಲ, ಶೇಖರ ಮಗದುಮ್ಮ, ಭೀಮಪ್ಪ ಮೈತ್ರಿ, ವಿಠ್ಠಲ ಲಂಗೋಟ್ಟಿ, ಆನಂದ ಮಾಕಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.