ತಾಳಿಕೋಟೆ : ವಿದ್ಯಾರ್ಥಿಗಳು ಉತ್ತಮ ಪ್ರತಿಭೆ ಹೊಂದಿದ್ದು, ತಮ್ಮ ಕಲಿಕಾ ಮಟ್ಟವನ್ನು ಇನ್ನಷ್ಟು ಸುಧಾರಿಸಿಕೊಳ್ಳುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಹಿರಿಯ ಶಿಕ್ಷಕ ಎಸ್.ವಿ. ಜಮಗೊಂಡಿ ಹೇಳಿದರು.
ತಾಳಿಕೋಟಿ ಎಸ್.ಎಸ್. ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಹತ್ತನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಸಚಿನ್ ಎಚ್. ಪಾಟೀಲ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹತ್ತನೇ ತರಗತಿ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಶೋಕ ಕಟ್ಟಿಯವರು ಮಾತನಾಡಿ, ?ಉಳಿ ಪೆಟ್ಟು ಬೀಳದೆ ಯಾವುದೇ ಕಲ್ಲು ಶಿಲೆಯಾಗದು? ಎಂಬ ನಾಣ್ಣುಡಿಯ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಎಸ್. ರಾಯಗೊಂಡ, ಸಿದ್ದನಗೌಡ ಮುದನೂರ, ಎಚ್.ಬಿ. ಪಾಟೀಲ, ಬಿ.ಐ. ಹಿರೇಹೊಳಿ ಹಾಗೂ ಪಾಲಕರ ಪ್ರತಿನಿಧಿಗಳಾದ ಶ್ರೀಮತಿ ಸುವರ್ಣ ಎಸ್. ಪತ್ತಾರ, ಶ್ಯಾಲೆಸಾ ಮಕಾನದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಗತಿ ಪರೀಕ್ಷೆಯಲ್ಲಿ ಅಗ್ರ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸ್ಟಾರ್ ಆಫ್ ದಿ ಮಂತ್ ಪದಕ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಐ. ಹಿರೇಹೊಳಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಸಿ. ಗುಡಗುಂಟಿ ವಂದನಾರ್ಪಣೆ ನೆರವೇರಿಸಿದರು.