ನೇಸರಗಿ: ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ವತಿಯಿಂದ ಕೃಷಿ ಸಖಿ ಮಾಡ್ಯೂಲ್-ಗಿ ತರಬೇತಿ ಕಾರ್ಯಕ್ರಮದ ಬ್ಯಾಚ್-೩, ೪ ಮತ್ತು ೫ರ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ರಾಮೀಣ ಮಹಿಳೆಯರಲ್ಲಿ ಕೃಷಿ ಸಂಬಂಧಿತ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿ, ರೈತರಿಗೆ ಅಗತ್ಯವಿರುವ ಕೃಷಿ ತಾಂತ್ರಿಕ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಶ್ರೀ ಬಿ. ಆರ್. ಪಾಟೀಲ ಅವರು, ಕೃಷಿ ಸಖಿಯರು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮತ್ತು ಕೃಷಿ ಇಲಾಖೆಯ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣಿನ ಆರೋಗ್ಯ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಬೆಳೆ ಉತ್ಪಾದನೆ ಹಾಗೂ ಮೌಲ್ಯವರ್ಧನೆ ಕುರಿತು ರೈತರಿಗೆ ಸರಳವಾಗಿ ಹಾಗೂ ಪ್ರಾಯೋಗಿಕವಾಗಿ ಮಾಹಿತಿ ನೀಡುವಲ್ಲಿ ಕೃಷಿ ಸಖಿಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಮ್ಮ ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ಸಂಖ್ಯೆಯ ರೈತರಿಗೆ ತಲುಪಿಸುವಂತೆ ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಶ್ರೀ ಪ್ರವೀಣ ಬಾಗೇವಾಡಿಯವರು ತಮ್ಮ ಸಂಕ್ಷಿಪ್ತ ಮಾತುಗಳಲ್ಲಿ ಕೃಷಿ ಸಖಿ ತರಬೇತಿಯ ಮಹತ್ವವನ್ನು ವಿವರಿಸಿ, ಮಹಿಳೆಯರ ಸಬಲೀಕರಣದ ಜೊತೆಗೆ ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಜ್ಞಾನವನ್ನು ಗ್ರಾಮ ಮಟ್ಟಕ್ಕೆ ತಲುಪಿಸುವಲ್ಲಿ ಕೃಷಿ ಸಖಿಯರು ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು. ರೈತರ ಸಮಸ್ಯೆಗಳನ್ನು ಅರಿತುಕೊಂಡು, ಕೃಷಿ ವಿಜ್ಞಾನಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಮಾರ್ಗದರ್ಶನದೊಂದಿಗೆ ಸೂಕ್ತ ತಾಂತ್ರಿಕ ಪರಿಹಾರಗಳನ್ನು ರೈತರಿಗೆ ತಲುಪಿಸುವಂತೆ ಅವರು ಸಲಹೆ ನೀಡಿದರು. ತರಬೇತಿಯ ಸಂದರ್ಭದಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳುವಂತೆ ಕೃಷಿ ಸಖಿಯರಿಗೆ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಅವರು ಮಾತನಾಡಿ, ಕೃಷಿ ಸಖಿ ತರಬೇತಿ ಕಾರ್ಯಕ್ರಮದ ಮೂಲಕ ಸಖಿಯರಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮಣ್ಣಿನ ಆರೋಗ್ಯ, ಬೆಳೆ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ರೈತರಿಗೆ ತಾಂತ್ರಿಕ ಸಲಹೆ ನೀಡುವ ಕುರಿತು ಅಗತ್ಯ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಕೃಷಿ ಸಖಿಯರು ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಮಾರ್ಗದರ್ಶನವನ್ನು ಬಳಸಿಕೊಂಡು ತಮ್ಮ ಗ್ರಾಮಗಳಲ್ಲಿ ರೈತರಿಗೆ ನಿರಂತರವಾಗಿ ಸೇವೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸಿಬ್ಬಂದಿಗಳಾದ ಡಾ. ಎಸ್. ಎಸ್. ಹಿರೇಮಠ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ ಹಾಗೂ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಳವಡಿಯ ಕೃಷಿ ಸಖಿ ಶ್ರೀಮತಿ ಪ್ರಭಾವತಿ ಹಡಪದ ಸ್ವಾಗತಿಸಿದರು, ಮುರಕಿಭಾವಿ ಕೃಷಿ ಸಖಿ ಶ್ರೀಮತಿ ಅಶ್ವಿನಿ ಉಳವಿ ವಂದಿಸಿದರು ಹಾಗೂ ಶ್ರೀಮತಿ ನೇತ್ರಾವತಿ ಕುರಕುರೆ ನಿರೂಪಿಸಿದರು.