ತಾಳಿಕೋಟೆ : ಪಟ್ಟಣದ ಶ್ರೀ ಎಸ್.ಎಸ್. ವಿದ್ಯಾಸಂಸ್ಥೆಯಲ್ಲಿ ದಾಸಶ್ರೇಷ್ಠ ಸಂತ ಕನಕದಾಸರ ೫೨೬ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್. ಪಾಟೀಲ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಬೇಕು. ಕೇವಲ ಪೂಜೆ ಸಲ್ಲಿಸಿದರೆ ಮಾತ್ರ ಸಾಲದು, ಅವರು ಸಾರಿದ ತತ್ವ, ಮೌಲ್ಯ ಹಾಗೂ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರೌಢಶಾಲೆಯ ಹಿರಿಯ ಶಿಕ್ಷಕರು ಹಾಗೂ ಸಾಹಿತಿಗಳಾದ ಎಸ್.ವಿ. ಜಾಮಗೊಂಡಿ ಅವರು ಸಂತ ಕನಕದಾಸರ ಜೀವನ ಚರಿತ್ರೆ, ಸಾಧನೆ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಎಸ್.ಬಿ. ಮಂಗ್ಯಾಳ, ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಬಿ. ಸಾಸನೂರ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಆಂಗ್ಲ ಮಾಧ್ಯಮ ಶಾಲೆಯ ಉಮೇಶ ಜಿ. ಅಬ್ಬಿಗೇರಿ, ಬಿ.ಐ. ಹಿರೇಹೊಳಿ ಸೇರಿದಂತೆ ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗದವರು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.