ತಾಳಿಕೋಟೆ : ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹರಿದಾಸ ಸಾಹಿತ್ಯ ಪರಂಪರೆಯ ಪ್ರಮುಖ ಸಂತ, ಕವಿ, ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾದ ಭಕ್ತ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾದ ರಾಜು ಜವಳಗೇರಿ ಮಾತನಾಡಿ, ಕನಕದಾಸರ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಪ್ರಸಿದ್ಧ ಚಿಂತನೆ ಇಂದಿಗೂ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಸಮಾಜ ಎಂದಿಗೂ ನಿಜವಾದ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ ಉಡುಪಿಯ ಶ್ರೀಕೃಷ್ಣ ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಕನಕನ ಕಿಂಡಿ ಪ್ರಸಂಗವು ಕನಕದಾಸರ ಜೀವನದ ಸಾಮಾಜಿಕ ಸಂದೇಶವನ್ನು ಜನಮಾನಸದಲ್ಲಿ ಇನ್ನಷ್ಟು ಗಾಢವಾಗಿ ನೆಲೆಯೂರಿಸಿದೆ. ಕೇವಲ ಜಯಂತಿಯಂದು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೀರ್ತನೆಗಳನ್ನು ಹಾಡುವುದರಿಂದ ಅವರ ಆಶಯಗಳು ಈಡೇರಲು ಸಾಧ್ಯವಿಲ್ಲ. ಬದಲಾಗಿ ಅವರು ಸಾರಿದ ಆಚಾರ, ವಿಚಾರ, ಸಮಾನತೆ ಹಾಗೂ ಸಾಮಾಜಿಕ ಸಂದೇಶಗಳನ್ನು ಅರ್ಥಮಾಡಿಕೊಂಡು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬಿ. ಮಂಗಳೂರು, ಮುಖ್ಯ ಅತಿಥಿಗಳಾದ ಸಂಗನಗೌಡ ಅಸ್ಕಿ, ಮುಖ್ಯಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.