ತಾಳಿಕೋಟೆ : ತಾಲೂಕಾಡಳಿತದ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೇಷ್ಠ ಸಂತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿರುವುದಲ್ಲದೆ, ಹಾಲುಮತ ಸಮಾಜದ ಮುಖಂಡರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಸಮಾಜದ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.
ಜಯಂತಿ ಆಚರಣೆಗೆ ತಾಲೂಕಾಡಳಿತದ ವತಿಯಿಂದ ಕಚೇರಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರು ಆಗಮಿಸಿ ಉಪತಹಸೀಲ್ದಾರ್ ಜೆ.ಐ. ತುಬಾಕೆ ಅವರೊಂದಿಗೆ ಚರ್ಚೆ ನಡೆಸಿದರು. ಹಾಲುಮತ ಸಮಾಜದ ಬಾಂಧವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಸುಮಾರು ೯೦ರಷ್ಟು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿರುವುದಕ್ಕೆ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸ್ಪಷ್ಟನೆ ನೀಡಿದ ಉಪತಹಸೀಲ್ದಾರ್ ತುಬಾಕೆ ಅವರು, ಕಾರ್ಯಕ್ರಮದ ಬಗ್ಗೆ ಹಾಲುಮತ ಸಮಾಜದ ಅಧ್ಯಕ್ಷ ಸಾಹೇಬಣ್ಣ ಆಲ್ಯಾಳ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಅವರು ಸಮಾಜದ ಇತರರಿಗೆ ತಿಳಿಸಲು ಮರೆತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಗೈರಾದ ಅಧಿಕಾರಿಗಳಿಗೆ ಮೇಲಧಿಕಾರಿಗಳ ಮೂಲಕ ನೋಟಿಸ್ ಕೊಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆದರೆ ಉಪತಹಸೀಲ್ದಾರ್ ಅವರ ಸಮಜಾಯಿಷಿಗೆ ಒಪ್ಪದ ಸಮಾಜದ ಮುಖಂಡರು, ಕಾಟಾಚಾರದ ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ ಹೊರನಡೆದರು. ಹಾಲುಮತ ಸಮಾಜದ ಯುವ ಮುಖಂಡ ಶಿವರಾಜ ಗುಂಡಕನಾಳ (ನಾಗೂರ) ಅವರ ನೇತೃತ್ವದಲ್ಲಿ ತಾಲೂಕಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ದಿಕ್ಕಾರದ ಘೋಷಣೆಗಳನ್ನು ಕೂಗಿದರು.
ನಂತರ ಸಮಾಜದ ಪ್ರಮುಖರು ಪಟ್ಟಣದ ಖಾಸಗಿ ಸ್ಥಳವೊಂದರಲ್ಲಿ ಕನಕದಾಸರ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
---
ಸಂತಶ್ರೇಷ್ಠ ಕನಕದಾಸರ ಜಯಂತಿಯನ್ನು ತಾಲೂಕಾಡಳಿತದ ವತಿಯಿಂದ ಆಚರಿಸುವಾಗ ಸರ್ಕಾರದ ಶಿಷ್ಟಾಚಾರದಂತೆ ಪೂರ್ವಭಾವಿಯಾಗಿ ಸಮಾಜದ ಮುಖಂಡರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಕಾರ್ಯಕ್ರಮದಲ್ಲಿ ತಾಳಿಕೋಟೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸಬೇಕಾಗಿತ್ತು. ಆದರೆ ಶೇ. ೯೦ರಷ್ಟು ಅಧಿಕಾರಿಗಳು ಗೈರಾಗಿರುವುದು ಕನಕದಾಸರಿಗೆ ತೋರಿದ ಅವಮಾನವಾಗಿದೆ. ಇದನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ನಿರ್ಲಕ್ಷ್ಯಕ್ಕೆ ಕಾರಣರಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ತಾಲೂಕಾಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸರ ಕಾಟಾಚಾರದ ಜಯಂತಿ ಕಾರ್ಯಕ್ರಮವನ್ನು ನಾವು ಬಹಿಷ್ಕರಿಸಿದ್ದೇವೆ.
ಶಿವರಾಜ ಗುಂಡಕನಾಳ (ನಾಗೂರ), ಹಾಲುಮತ ಸಮಾಜದ ಮುಖಂಡರುಅಧಿಕಾರಿಗಳಿಂದ ಕನಕದಾಸರ ಸಂದೇಶದ ಸ್ಮರಣೆ: ಇತ್ತ ತಾಲೂಕಾಡಳಿತದ ವತಿಯಿಂದ ಸರಳವಾಗಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಅವರು ಸಂತ ಕನಕದಾಸರ ಜೀವನ, ಆದರ್ಶ ಹಾಗೂ ಸಂದೇಶಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಜೆ.ಐ. ತುಬಾಕೆ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎ.ಜಿ. ಬಿರಾದಾರ, ಪುರಸಭೆಯ ಸುರೇಶ ಅಮರಣ್ಣವರ, ದಲಿತ ಮುಖಂಡ ಜೈಭೀಮ ಮುತ್ತಗಿ, ಸಿಆರ್‌ಸಿ ರಾಜು ವಿಜಾಪುರ, ಬಿಆರ್‌ಸಿ ಕಾಶಿನಾಥ ಸಜ್ಜನ, ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳಾದ ಸೃಷ್ಟಿ ಡಂಬಳ, ಮುನ್ನಾ ಅತ್ತಾರ, ಆರ್.ಎಚ್. ಮೂಕಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.