ಮೂಡಲಗಿ : ಕ್ರೀಡೆಗಳು ಕ್ರೀಡಾ ಪಟುಗಳಿಗೆ ಶಿಸ್ತು ಮತ್ತು ಉತ್ಸಾಹವನ್ನು ತುಂಬುವುದಲ್ಲದೆ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ ಸೊನವಾಲಕರ ಅಭಿಪ್ರಾಯ ಪಟ್ಟರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಮೂಡಲಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದ ಕ್ರೀಡಾಕೂಟದಿಂದ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಯುವ ಸಂಘಟಕ ಸಿದ್ದಣ್ಣ ದುರದುಂಡಿಯವರು ನಿರಂತರ ನಿಸ್ವಾರ್ಥ ಸೇವೆ ಮತ್ತು ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ’ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ’ಎಂದರು.
ಮೂಡಲಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ನೆರಲೇಕರ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ಪ್ರಾಥಮಿಕ ಹಂತವು ಅಡಿಪಾಯವಿದ್ದಂತೆ. ಕ್ರೀಡಾಕೂಟವು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಪ್ರೇರಣೆ ನೀಡುತ್ತದೆ. ಕ್ರೀಡೆಗಳು ಶಾಂತಿ, ಸಾಮರಸ್ಯವನ್ನು ಬೆಳೆಸುತ್ತವೆ. ಕ್ರೀಡೆಗಳಲ್ಲಿ ಸೋಲು, ಗೆಲುವಿಗಿಂತ ಭಾಗವಹಿಸಿ ಕ್ರೀಡಾ ಪ್ರತಿಭೆಯನ್ನು ಮೆರೆಯುವುದು ಮುಖ್ಯವಾಗಿರುತ್ತದೆ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ವಿಜೇತರಾಗುವ ಕ್ರೀಡಾಪಟುಗಳು ಜಿಲ್ಲಾ ಮಟ್ಟ, ನಂತರ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ ಇದರ ಸದುಪಯೋಗವನ್ನು ನಮ್ಮ ತಾಲೂಕಿನ ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರಾದ ಸಿದ್ದಪ್ಪ ಹೊಸಮನಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ, ವಿಠ್ಠಲ ಮುರ್ಕಿಬಾವಿ, ಮಹಾಲಕ್ಷ್ಮಿ ಮಾಡಮಗೇರಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪಿಎಸ್‌ಐ ವೈ.ಎಸ್. ಬಿಸನಾಳ, ದೈಹಿಕ ಪರಿವೀಕ್ಷಕ ಎಸ್.ಬಿ. ಹಳಿಗೌಡರ, ಚೇತನ ಕುರಿಹುಲಿ, ರಜನಿಕಾಂತ ಮಾಳೋದೆ, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಪ್ರಾಚಾರ್ಯರಾದ ಡಾ. ಎಸ್.ಎಲ್. ಚಿತ್ರಗಾರ, ಡಾ. ಎಂ.ಕೆ. ಕಂಕಣವಾಡಿ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಸ ಗೊಡ್ಯಾಗಳ, ಗೋಪಾಲ ಗಡ್ಡೆಕಾರ, ಲಕ್ಕಪ್ಪ ಹಳ್ಳೂರ, ಮೂಡಲಗಿ ತಾಲೂಕ ಅನು?ನಾಧಿಕಾರಿ ರೋಹಿಣಿ ಪಾಟೀಲ, ಕೂತುಜಾ ಮುತಾನಿ, ಶಾನೂರ್ ನಗಾರಿ ಹಾಗೂ ನಿರ್ಣಾಯಕರು ಮತ್ತು ೬೫೦ ಕ್ರೀಡಾ ಪಟುಗಳು ಭಾಗವಹಿಸಿದರು. ಜಯಶ್ರೀ ಮಡಿಹಳ್ಳಿ ನಿರೂಪಿಸಿ ಸ್ವಾಗತಿಸಿದರು. ಹಣಮಂತ ಮದನವರ ಸ್ವಾಗತಿಸಿದರು.