ಮುದ್ದೇಬಿಹಾಳ : ಸುಂದರ ಬದುಕನ್ನು ಕಟ್ಟಿಕೊಳ್ಳಲು ಶರಣರ ವಚನಗಳೇ ಆಧಾರವಾಗ ಬಲ್ಲವು ಎಂದು ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಅಶೋಕ ಪಿ.ಮಣಿ ಅಭಿಪ್ರಾಯ ಪಟ್ಟರು!
ಅವರು ಪಟ್ಟಣದ ಬಸವನಗರದಲ್ಲಿರವ ಶ್ರೀಮತಿ ರೇಣುಕಾ ಹಾಗೂ ಭೀಮಣ್ಣ ಹಿರೇ ಅಂಬಿಗೇರ ದಂಪತಿಗಳ ಮನೆಯಲ್ಲಿ ಶರಣ ಶ್ರಾವಣದ ನಿಮಿತ್ಯ ,ಬಸವ ಮಹಾಮನೆ ಸಮೀತಿ ಹಾಗೂ ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹದಿನೈದನೇ ದಿನದ ಮನೆಯಂಗಳದಿಂದ ಮನದಂಗಳಕ್ಕೆ ಶರಣರ ಸಂದೇಶ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ,ಅದರ ಮುಖೇನ ಸಮಾಜದಲ್ಲಿ ಸಮಾನತೆ ತರಲು ಹಗಲಿರುಳು ಶ್ರಮಿಸಿದರು.ಅಂದು ಅವರು ರಚಿಸಿರುವ ವಚನಗಳು ತ್ರಿಕಾಲ ಸತ್ಯ!ಶರಣರು ರಚಿಸಿರುವ ವಚನಗಳ ಸಾರವನ್ನು ಅರ್ಥೈಸಿಕೊಂಡು ನಡೆದರೆ ಬದುಕು ಸುಂದರವಾಗಬಲ್ಲದು!ನಮ್ಮ ನೆಮ್ಮದಿಯ ಬದುಕಿಗೆ ಶರಣರ ವಚನಗಳೇ ಮೂಲ ಆಧಾರವೆಂದು ಅಶೋಕ ಮಣಿ ನುಡಿದರು.ಮನೆಯಲ್ಲಿ ಮಕ್ಕಳಿಗೆ 12ನೇ ಶತಮಾನದ ಶರಣರ ಪರಿಚಯವನ್ನು ಮಾಡಿಕೊಟ್ಟು,ಅವರು ರಚಿಸಿರುವ ವಚನಗಳ ಸಾರವನ್ನು ತಿಳಿಸಿಕೊಡುತ್ತ ,ಮಕ್ಕಳನ್ನು ಅಧ್ಯನಶೀಲರನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿಯನ್ನು ಪಾಲಕರು ಹೊರಬೇಕು ಎಂದು ಹೇಳಿದರು!
ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ತಾಲೂಕು ಶರಣಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಲತವಾಡ ಅವರು,ಎಲ್ಲಾ ಶರಣರಲ್ಲಿ ಅತ್ಯಂತ ನಿಷ್ಠುರವಾಗಿ ಹಾಗೂ ನೇರ,ದಿಟ್ಟ ಮಾತುಗಳಿಂದ ಸಮಾಜವನ್ನು ತಿದ್ದುವ ಕೆಲಸವನ್ನು ಅಂಬಿಗರ ಚೌಡಯ್ಯನವರು ಮಾಡಿದರು. ಅಧರಕ್ಕೆ ಕಹಿ ಉದರಕ್ಕೆ ಸಿಹಿಯಂತೆ ಅವರ ವಚನಗಳು ಇವೆ.ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಎತ್ತಿತೋರಿಸಿ,ಸಮಾಜದಲ್ಲಿಯ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯವನ್ನು ಅವರು ಮಾಡಿದ್ದನ್ನು ಅವರ ವಚನಗಳಲ್ಲಿ ನಾವು ಕಾಣಬಹುದಾಗಿದೆ ಎಂದು ಅವರು ನುಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಾತೋಶ್ರೀ ಶರಣಮ್ಮ ತಾಯಿಯವರು ವಹಿಸಿಕೊಂಡಿದ್ದರು.
ಹಿರಿಯ ಸಾಹಿತಿ ಚಂದ್ರಶೇಖರ ಇಟಗಿ, ಪ್ರೊ.ಬಿ.ಎನ್.ಚೌಡಾಪೂರ,ಬಿ.ಎಂ ರಾಂಪೂರ,ಎಂ.ಬಿ.ಪಾಟೀಲ,ಬಿ.ಎಸ್.ಮೇಟಿ,ನ್ಯಾಯವಾದಿ ಎನ್.ಆರ್.ಮೊಕಾಶಿ, ಬಸವ ಮಹಾಮನೆ ಸಮೀತಿಯ ಅಧ್ಯಕ್ಷ ಎಸ್.ಎ.ಬೇವಿನಗಿಡದ,ಕದಳಿ ವೇದಿಕೆಯ ಅಧ್ಯಕ್ಷೆ ಕಾಶಿಬಾಯಿ ರಾಂಪೂರ,ಬಸವರಾಜ ಲಿಂಗದಳ್ಳಿ, ಬಿ.ವ್ಹಿ.ಕೋರಿ,ಕಾರ್ಯದರ್ಶಿ ಎಸ್.ಆರ್.ಗೌಡರ ಸೇರಿದಂತೆ ಅನೇಕ ಜನ ಶರಣರು ಹಾಗೂ ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಮಹಾಮನೆ ಬಳಗದ ಸದಸ್ಯರು ಪ್ರಾರ್ಥಿಸಿದರು.ಕೆ.ಎಸ್.ಆರ್.ಟಿ.ಸಿ.ಯ ನಿವೃತ್ತ ನೌಕರ ಭೀಮಣ್ಣ ಹಿರೇ ಅಂಬಿಗೇರ ಸ್ವಾಗತಿಸಿದರು. ಪ್ಯಾಟಿಗೌಡರ ಶರಣು ಸಮರ್ಪಿಸಿದರು.ಕಾರ್ಯಕ್ರಮವನ್ನು ನಿವೃತ್ತ ಯೋಧ ಸಂಗಣ್ಣ ಕಟ್ಟಿ ನಿರೂಪಿಸಿದರು.