ಬೆಳಗಾವಿ,
ಹಿಂದಿನ ವರ್ಷಗಳಿಗಿಂತ ಭಾರಿ ಪ್ರಮಾಣದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಬಿಸಿಲು ಏರುತ್ತಿದ್ದಂತೆ ಹೊರಗಡೆ ಹೋಗುವುದೇ ದುಸ್ತರವಾಗಿದೆ.

ವಯೋವೃದ್ಧರಿಗಂತೂ ಬಿಸಿಲು ಪ್ರಾಣಕ್ಕೇ ಸಂಚಕಾರ ತರುವ ಮಟ್ಟಿಗಿದೆ. ಟ್ರಾಫಿಕ್ ಸಿಗ್ನಲ್ ಗಳಲ್ಲಿ ವಾಹನ ಸವಾರರು ನೆತ್ತಿಸುಡುವ ಬಿಸಿಲಲ್ಲೇ ನಿಲ್ಲಬೇಕಾಗುತ್ತಿದೆ. ಇಂಥ ಪರಿಸ್ಥಿತಿಯನ್ನು ಮನಗಂಡಿರುವ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯು ನಗರದ ಆಯ್ದ ಕೆಲ ಸಿಗ್ನಲ್ ಸ್ಥಳಗಳಲ್ಲಿ ನೆರಳು ಛಾವಣಿ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ನಗರದ ಹೃದಯ ಭಾಗದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಿಗ್ನಲ್ ನಲ್ಲಿ ನೆರಳು ಛಾವಣಿ ಅಳವಡಿಸಲಾಗಿದೆ.
ಮಂಗಳವಾರ ಸಿಗ್ನಲ್ ಬೀಳುತ್ತಲೇ ಕೆಲ ಕ್ಷಣ ಹಾಯಾಗಿ ನೆತ್ತಿ ತಂಪಾಗಿಸಿಕೊಂಡ ವಾಹನ ಸವಾರರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಕೆ. ರಾಮಾನುಜನ್ ಹಾಗೂ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರ ಈ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.