ರಾಮದುರ್ಗ,ಅ,೨೭: ಭಾರತೀಯ ಕಲೆ, ಸಾಹಿತ್ಯ, ಜನಪದ ಸಂಸ್ಕೃತಿ ನಮ್ಮ ನೆಲದ ಅಸ್ಮಿತೆಯಾಗಿದೆ. ನಶಿಸಿ ಹೋಗುತ್ತಿರುವ ಮೂಲ ಜನಪದ ಕಲೆಯನ್ನು ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದೆ ಎಂದು ಸುರೇಬಾನ ಪಿಎಸ್.ಐ ಗುರುರಾಜ ಕಲಬುರ್ಗಿ ಹೇಳಿದರು.
ರಾಮದುರ್ಗ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ಶಬರಿಕೊಳ್ಳದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶಬರಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಬರಿ ಓರ್ವ ಮಹಾತಪಸ್ವಿ. ಶ್ರೀರಾಮನ ಬರುವಿಕೆಗಾಗಿ ಕಾಯ್ದ ಐತಿಹಾಸಿಕ ಸ್ಥಳ ಶಬರಿ ಕೊಳ್ಳದಲ್ಲಿ ಪ್ರತಿವರ್ಷ ಶಬರಿ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸುತ್ತ ಬಂದಿರುವುದು ಅತ್ಯಂತ ಸ್ತೂತ್ಯ ಎಂದರು.
ಸುರೇಬಾನ ಗ್ರಾಮ ಪಂಚಾಯತ ಅಧ್ಯಕ್ಷ ಅಶ್ರಫ್‌ಅಲಿ ಬಂದಗಿ ಮಾತನಾಡಿ, ಆದಿ ಕಾಲದಿಂದಲೂ ಜನಪದ ಕಲೆ ಮನೆ ಮನೆಗಳಲ್ಲಿ ಬೆಳೆದು ಬಂದಿರುವಂತಹದ್ದಾಗಿದೆ. ಇಂತಹ ಜನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ, ಕಲೆಯನ್ನು ಪ್ರೋತ್ಸಾಹಿಸುತ್ತಿರುವ ರಾಮದುರ್ಗ ಕಲ್ಚರಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಮದುರ್ಗ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಕುಂಬಾರ ಮಾತನಾಡಿ, ರಾಮದುರ್ಗ ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಕಲಾವಿದರಿಗೆ ವೇದಿಕೆ ಪೂರೈಸುವುದುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ವೇದಿಕೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಸಂಗೀತ, ನೃತ್ಯ, ವೃತ್ತಿಪರ ನಾಟಕಗಳು, ಜಾನಪದ ಕಲೆಗಳನ್ನು ನಿರಂತರವಾಗಿ ಉತ್ತೇಜಿಸುತ್ತ ಬರಲಾಗಿದೆ ಎಂದರು.
ಕಲ್ಚರಲ್ ಟ್ರಸ್ಟ್‌ನ ಉಪಾಧ್ಯಕ್ಷ ಈಶ್ವರ ಹಾಲಭಾವಿ, ಸದಸ್ಯರಾದ ಚಂದ್ರಕಾಂತ ಹೊಸಮನಿ, ಮನಿಹಾಳ ಗ್ರಾ.ಪಂ ಸದಸ್ಯರಾದ ಮಾರುತಿ ಪ್ಯಾಟಿ, ನೂರೊಂದ ಕೊಂಗಿ, ಪ್ರವೀಣ ಗೊನಬಾಳ, ರಮೇಶ ಪತ್ತೇಪೂರ, ಜನಸಾಮಾನ್ಯರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಈರಣ್ಣ ಕಲ್ಯಾಣಿ, ಮಹರ್ಷಿ ವಾಲ್ಮೀಕಿ ಜಾನಪದ ಕಲಾ ಸಂಘದ ಅಧ್ಯಕ್ಷ ಯಮನಪ್ಪ ಬೆಳಗಂಟಿ, ಐ.ಎಸ್. ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ವಿಜಯಲಕ್ಷ್ಮೀ ಕಮ್ಮಾರ ಪ್ರಾರ್ಥಿಸಿದರು. ಈಶ್ವರ ಹಾಲಭಾವಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ನಂತರ ಜರುಗಿದ ಕಾರ್ಯಕ್ರಮದಲ್ಲಿ ಪದ್ಮಭಾಸ್ಕರ್ ನೃತ್ಯ ಕಲಾಕೇಂದ್ರ ಸುರೇಬಾನ ಕಲಾವಿದರಿಂದ ಭರತನಾಟ್ಯ, ಶಾಖಾಂಬರಿ ಜಾನಪದ ಕಲಾತಂಡದ ಶಂಕ್ರವ್ವ ಮುಗಳಿ ಅವರ ನಿರ್ದೇಶನದಲ್ಲಿ ದೀಪನೃತ್ಯ, ಡಾ.ಗುರುಬಸವ ಮಹಾಮನೆ ಅವರಿಂದ ವಯೋಲಿನ್ ವಾದನ, ಧಾರವಾಡದ ಸ್ವರ ಸಂವಾದಿನಿ ಸಂಗೀತ ವಿದ್ಯಾಲಯದ ಕಲಾವಿದರಿಂದ ಸಮೂಹ ಗಾಯನ. ಸುರೇಬಾನದ ವಿಜಯಲಕ್ಷ್ಮೀ ಕಮ್ಮಾರ ಮತ್ತು ವಿನಾಯಕ ಕಮ್ಮಾರ ಅವರಿಂದ ಸುಗಮ ಸಂಗೀತ, ರಾಮದುರ್ಗದ ರಾಧಾಪೂರ ಪೇಟೆಯ ಜಾನಪದ ಕಲಾವಿದರಿಂದ ಸಾಂಪ್ರದಾಯದ ಹಾಡುಗಳ ಕಾರ್ಯಕ್ರಮ ಜರುಗಿತು. ತಬಲಾದಲ್ಲಿ ಡಾ. ಶಿವರಾಜ ಈರಾಪೂರ, ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ, ಪ್ರಶಾಂತ ಭಂಡಿವಾಡ, ಕೀ ಬೋರ್ಡದಲ್ಲಿ ವಿನಾಯಕ ಕಮ್ಮಾರ ಸಾಥ್ ಸಂಗೀತ ನೀಡಿದರು.