ಮುಧೋಳ: ಸೆ. ೧೧: ತಾಲೂಕಿನ ಮಾಲಾಪೂರ ಗ್ರಾಮದಲ್ಲಿ ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಸ್ವ ಉದ್ಯೋಗದ ಮನೋಭಾವ ಬೆಳೆಸುವ ಉದ್ದೇಶದಿಂದ ಮುಧೋಳ ವಲಯದ ಮಾಲಾಪುರ ಕಾರ್ಯಕ್ಷೇತ್ರದ ಸರಸ್ವತಿ ಜ್ಞಾನವಿಕಾಸ ಕೇಂದ್ರದಲ್ಲಿ ಎರಡು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸೀರೆಗಳಿಗೆ ವಿವಿಧ ಬಗೆಯ ಗುಚ್ಛಗಳನ್ನು ಹಾಕುವ ಕಲೆ ಹಾಗೂ ಸೀರೆ ಫೋಲ್ಡಿಂಗ್ ಕುರಿತು ನಡೆದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ನೇಹಲೋಕ ಸ್ವಾವಲಂಬಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸ್ನೇಹಾ ಹಿರೇಮಠ ಹಾಗೂ ಗ್ರಾಮದ ಗಣ್ಯರಾದ ಹೊಳೆಬಸಯ್ಯ ಹಿರೇಮಠ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಸ್ನೇಹಾ ಹಿರೇಮಠ, “ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಿ, ತಮ್ಮ ಕುಟುಂಬದ ನಿರ್ವಹಣೆಯನ್ನು ಸಮರ್ಥವಾಗಿ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲೂ ಬೆಳೆದು ಬರಬೇಕು” ಎಂದು ಹೇಳಿದರು.
ತಾಲೂಕು ವಿಚಕ್ಷಣಾಧಿಕಾರಿ ವಿನಯಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸುವರ್ಣ ನಂದಿಕೋಲಮಠ, ಒಕ್ಕೂಟದ ಅಧ್ಯಕ್ಷೆ ಸರೋಜಿನಿ ಹಿರೇಮಠ ಹಾಗೂ ಕೇಂದ್ರದ ಸದಸ್ಯೆ ಸುಮಿತ್ರಾ ಬೊರಗಿ ಅವರು ತರಬೇತಿಯಿಂದ ಪಡೆದ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.ತರಬೇತಿ ಶಿಕ್ಷಕಿ ಆಶ್ವಿನಿ, ಸೇವಾ ಪ್ರತಿನಿಧಿ ಹೇಮಾ ಟಿಕರಿ, ಜ್ಞಾನವಿಕಾಸ ಕೇಂದ್ರದ ಸದಸ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳೆಯರಿಗೆ ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ತರಬೇತಿ ಸಹಕಾರಿಯಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.