ಬಳ್ಳಾರಿ,ಸೆ.11 ಮ್ಯಾರಥಾನ್ ಓಟವು ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿದರೆ, ನಡಿಗೆಯು ಮನೋಬಲ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಬಸರೆಡ್ಡಿ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಚ್‌ಐವಿ ನಿಯಂತ್ರಣ ಮತ್ತು ನಿರ್ವಹಣಾ ಘಟಕ ಹಾಗೂ ನಗರದ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ‘ಓಟ ಆರೋಗ್ಯಕ್ಕೆ-ನಡಿಗೆ ಎಚ್‌ಐವಿ ನಿಯಂತ್ರಣಕ್ಕೆ’ ಎಂಬ ಧ್ಯೇಯವಾಕ್ಯದೊಂದಿಗೆ ಮಂಗಳವಾರ ಇಂದಿರಾ ವೃತ್ತದಲ್ಲಿ ಆಯೋಜಿಸಿದ್ದ ಎಚ್‌ಐವಿ ಜಾಗೃತಿ ಮ್ಯಾರಥಾನ್ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಎಚ್‌ಐವಿ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಎಚ್‌ಐವಿ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ ಅವರು ಪ್ರಾಸ್ತಾವಿಕ ಮಾತನಾಡಿ, ಎಚ್‌ಐವಿ ನಿಯಂತ್ರಣದಲ್ಲಿ ಸಾರ್ವಜನಿಕ ಜಾಗೃತಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು ಹಾಗೂ ಇಂತಹ ಸೋಂಕುಗಳಿAದ ದೂರವಿರಲು ತಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ, ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಯೋಜನೆಯಡಿ ಕ್ಯೂಆರ್ ಕೋಡ್ ಬಳಸಿಕೊಂಡು, ಅಪಾಯದಲ್ಲಿರುವ ಸಾರ್ವಜನಿಕರು ಸಮೀಪದ ಐಸಿಟಿಸಿ ಪರೀಕ್ಷಾ ಕೇಂದ್ರಗಳನ್ನು ಪತ್ತೆಹಚ್ಚಿ ಉಚಿತ ತಪಾಸಣೆ ಮಾಡಿಸಿಕೊಳ್ಳುವ ವಿಧಾನದ ಕುರಿತೂ ಅರಿವು ಮೂಡಿಸಲಾಯಿತು.
ನಗರದ ಇಂದಿರಾ ವೃತ್ತದಲ್ಲಿ ಮ್ಯಾರಥಾನ್‌ಗೆ ಗಣ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ಪ್ರಾರಂಭವಾದ ಮ್ಯಾರಾಥಾನ್ ಕೂಲ್ ಕಾರ್ನರ್, ಸತ್ಯ ನಾರಾಯಣಪೇಟೆ ಮೇಲ್ಸೇತುವೆ ಹಾಗೂ ಕೆಇಬಿ ವೃತ್ತದ ಮಾರ್ಗವಾಗಿ ಚನ್ನಬಸಪ್ಪ ಲೇಔಟ್ ಎದುರಿನ ಭಾರತ್ ಪೆಟ್ರೋಲ್ ಬಂಕ್‌ವರೆಗೆ ಸಾಗಿ ಮುಕ್ತಾಯಗೊಂಡಿತು.
ನಗರದ ವಿವಿಧ ಪದವಿ, ಪಿಯುಸಿ ಹಾಗೂ ಡಿಪ್ಲೋಮಾ ಕಾಲೇಜುಗಳ 200ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
*ಮ್ಯಾರಥಾನ್ ವಿಜೇತರು:*
ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ರೂ.5,000, ದ್ವಿತೀಯ ರೂ.3,500 ಹಾಗೂ ತೃತೀಯ ರೂ.2,500 ನಗದು ಬಹುಮಾನದೊಂದಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
*ಪುರುಷರ ವಿಭಾಗ:*
ಪ್ರಥಮ:ಎಸ್. ಪವನ್ (ವೀರಶೈವ ಕಾಲೇಜು, ಬಳ್ಳಾರಿ)
ದ್ವಿತೀಯ: ಜಗದೀಶ್ ಬಿ. (ಸಿಟಿ ಕಾಲೇಜು, ಬಳ್ಳಾರಿ)
ತೃತೀಯ: ಉಮೇಶ್ ಜಿ. (ಸರಳಾದೇವಿ ಕಾಲೇಜು)
*ಮಹಿಳೆಯರ ವಿಭಾಗ:*
ಪ್ರಥಮ: ಪವಿತ್ರ (ಬಿಎಂಸಿಆರ್‌ಸಿ ನರ್ಸಿಂಗ್ ಕಾಲೇಜು)
ದ್ವಿತೀಯ: ಸಂಧ್ಯಾ ಜಿ. (ಸರಳಾದೇವಿ ಕಾಲೇಜು)
ತೃತೀಯ: ನಾಗೇಶ್ವರಿ (ಸರಳಾದೇವಿ ಕಾಲೇಜು)
ಕಾರ್ಯಕ್ರಮದಲ್ಲಿ ಡ್ಯಾಪ್ಕು, ಐಸಿಟಿಸಿ, ಮೊಬೈಲ್ ಐಸಿಟಿಸಿ, ಡಿಎಸ್‌ಆರ್‌ಸಿ, ಎಆರ್‌ಟಿ, ಎಸ್‌ಎಸ್‌ಕೆ ಹಾಗೂ ವಿಮುಕ್ತಿ, ಸೌಖ್ಯ, ಬೆಳಕು ಸಮುದಾಯ ಸೇವಾ ಸಂಸ್ಥೆ, ನಿತ್ಯ ಜೀವನ ಮತ್ತು ಎಫ್‌ಪಿಎಐ ಸಂಸ್ಥೆಗಳ ಪ್ರತಿನಿಧಿಗಳು, ರಕ್ತಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು.