ಸವದತ್ತಿ,ಜು,೧೩ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಹಯೋಗದೊಂದಿಗೆ ದಿನಾಂಕಃ ೧೧-೦೭-೨೦೨೬ ರಂದು ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿನ ೭೨೬೩ ಬಾಕಿ ಇರುವ ಪ್ರಕರಣಗಳ ಪೈಕಿ ಒಟ್ಟು ೧೪೩೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ ೩೨೭ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ, ಪಕ್ಷಗಾರರ ನ್ಯಾಯಾಲಯದ ದೀರ್ಘಾವಧಿಯ ಪ್ರಕ್ರಿಯೆ ಮತ್ತು ವೆಚ್ಚವನ್ನು ತಪ್ಪಿಸಬಹುದು. ಇದು ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪಕ್ಷಗಾರರಿಗೆ ತ್ವರಿತ ಮತ್ತು ಸುಲಭವಾದ ಪರಿಹಾರವನ್ನು ಒದಗಿಸುತ್ತದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ, ರವರು ತಿಳಿಸಿದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ. ಮಂಜುನಾಥ ನಾಯಕ, ನ್ಯಾಯಾಧೀಶರ ಉಪಸ್ಥಿತಿಯಲ್ಲಿ ವೈವಾಹಿಕ ಮನಸ್ತಾಪದಿಂದ ಅನೇಕ ದಿನಗಳಿಂದ ದೂರವಾಗಿದ್ದ ದಂಪತಿಗಳನ್ನು ೨ ಪ್ರಕರಣಗಳಲ್ಲಿ ಪುನಃ ಒಗ್ಗೂಡಿಸಲಾಯಿತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಬಿ ಬೆಲ್ಲದ, ರವರು ಮಾತನಾಡಿ ಈ ಬಾರಿ ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳವುದರಿಂದ ಉಭಯ ಪಕ್ಷಗಾರರ ಬಾಂಧವ್ಯವು ಉಳಿಯುತ್ತದೆ. ಕಡಿಮೆ ಕರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ಒಳ್ಳೆಯ ಅವಕಾಶವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಲೋಕ್ ಅದಾಲತನಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ.ಮುನವಳ್ಳಿ ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಗಳಾದ ಎಸ್.ಎಸ್.ಕಾಳಪ್ಪನವರ, ಆರ್.ವಿ.ಹುಂಬಿ ಮಹಿಳಾ ಪ್ರತಿನಿಧಿ ಎಸ್.ವಾಯ್.ಶಿಬಾರಗಟ್ಟಿ ವಕೀಲ ಸಂಧಾನಕಾರರಾದ ಎಫ್.ಎಮ್.ಕಾಳೆ, ಎಸ್.ಎಮ್.ಪೆಂಡಾರಿ, ಆರ್.ಪಿ.ತೋಟಗಿ, ಹಾಗೂ ನ್ಯಾಯವಾದಿಗಳಾದ ಎಲ್.ಟಿ.ಹೊಸಮನಿ, ಎಮ್.ಬಿ.ದ್ಯಾಮನಗೌಡರ, ಸಿ.ಬಿ.ದೊಡಗೌಡರ, ಸಿ.ಎಸ್.ಮುತ್ತಗಿ, ಜಿ.ವಾಯ್.ಕರಮಲ್ಲಪ್ಪನವರ, ಎಮ್.ಎಮ್.ಯಲಿಗಾರ, ಬಿ.ಕೆ.ಕಡಕೋಳ, ಎಮ್.ಎಫ್.ಬಾಡಿಗೇರ, ಮುಂತಾದವರು ಉಪಸ್ಥಿತರಿದ್ದರು
