ಬೀಳಗಿ- ಅನಗವಾಡಿ ಗ್ರಾಮದ ಕೆರೆಗೆ ಒಂದು ವಾರದೊಳಗೆ ನೀರು ತುಂಬಿಸಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸಬೇಕು. ರೈತರಿಗಾಗಿ ಪ್ರತ್ಯೇಕ ವಿದ್ಯುತ್ ಸ್ಟೇಷನ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ, ತಾಲೂಕು, ಗ್ರಾಮ ಘಟಕಗಳ ನೇತೃತ್ವದಲ್ಲಿ ರೈತರು ಬೀಳಗಿ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ ಅನಗವಾಡಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆರೆ ನಿರ್ಮಿಸಿ ದ್ದರೂ ಕಳೆದ ಹಲವು ವರ್ಷಗಳಿಂದ ಕೆರೆಗೆ ನೀರು ತುಂಬಿಲ್ಲ. ಪ್ರಸಕ್ತ ಬರಗಾಲದಿಂದಾಗಿ ಗ್ರಾಮದಲ್ಲಿ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಬೋರ್‌ವೆಲ್‌ಗಳಲ್ಲಿಯೂ ಸಮರ್ಪಕವಾಗಿ ನೀರು ದೊರೆಯದೆ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೂಲಿ ಕಾರ್ಮಿಕರಿಗೆ ಮಾಡಿದ ಖರ್ಚು ಸಹ ಕೈಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು
ಅನಗವಾಡಿಯಲ್ಲಿ ಈಗಾಗಲೇ 33 ಕೆ.ವಿ. ವಿದ್ಯುತ್ ಸ್ಟೇಷನ್ ಇದ್ದರೂ ಅದು ನಿರಂತರ ಜ್ಯೋತಿ ಯೋಜನೆಯಡಿ ಸುಮಾರು 15 ಗ್ರಾಮಗಳಿಗೆ ವಿದ್ಯುತ್ ಪೂರೈಸುತ್ತಿದೆ. ಇದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ದೊರೆಯದೆ ರೈತರ ನೀರಾವರಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅನಗವಾಡಿ ಗ್ರಾಮಕ್ಕೆ ನೂತನ 110 ಕೆ.ವಿ. ವಿದ್ಯುತ್ ಸ್ಟೇಷನ್ ಮಂಜೂರು ಮಾಡಬೇಕು. ಅಲ್ಲಿಯವರೆಗೆ ಪರ್ಯಾಯವಾಗಿ ಸುನಗ ಹಾಗೂ ತೋಳಮಟ್ಟಿ ವಿದ್ಯುತ್ ಸ್ಟೇಷನ್‌ಗಳಿಂದ ಅನಗವಾಡಿ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೆಸ್ಕಾಂ ಇಲಾಖೆಗೆ ಒತ್ತಾಯಿಸಿದರು.
ಅಧಿಕಾರಿಗಳಿಗೆ ಮನವಿ ಸಲ್ಲಿಕೆ -
ಭಾರತೀಯ ಕಿಸಾನ ಸಂಘದ ಪದಾಧಿಕಾರಿಗಳು ಹಾಗೂ ರೈತರು ಬೀಳಗಿ ತಹಶೀಲ್ದಾರ ವಿನೋದ ಹತ್ತಳ್ಳಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಪಾಟೀಲ ಹಾಗೂ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಬೋಕೆ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಕೆರೆಗೆ ನೀರು ತುಂಬಿಸುವುದು, ವಿದ್ಯುತ್ ಸಮಸ್ಯೆ ಹಾಗೂ ನೂತನ ವಿದ್ಯುತ್ ಸ್ಟೇಷನ್ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕಬ್ಬು ಬೆಳೆಗಾರರ ಜಿಲ್ಲಾ ಪ್ರಮುಖ ಅಶೋಕ ಮಂತ್ರಿ, ರೈತ ಮುಖಂಡರಾದ ಗುರುಪಾದಯ್ಯ ಕಂಬಿ, ಮಹಾರುದ್ರಯ್ಯ ಕಂಬಿ, ಶ್ರೀಶೈಲ ಉಣದ, ಮುತ್ತಣ್ಣ ಅಂಗಡಿ, ಮಲ್ಲಪ್ಪ ಮೇಟಿ, ಬಸಯ್ಯ ಮೂತಿಮಠ, ರುದ್ರಪ್ಪ ಮೇಟಿ, ಬಸು ಚಬ್ಬಿ, ಮಹೇಶ ಅಂಗಡಿ, ಮಲ್ಲಪ್ಪ ಕುಟಕನಕೇರಿ, ಉಮೇಶ್ ಅಕ್ಕಿಮರಡಿ, ವಿಶ್ವನಾಥ ಪಾಟೀಲ, ನಾಗಪ್ಪ ಮೇತ್ರಿ, ಮಲ್ಲಪ್ಪ ಅಂಗಡಿ, ಚಿನ್ನಪ್ಪ ಹಂಚಿನಾಳ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಇದ್ದರು.