ತಾಳಿಕೋಟೆ, ಪಂಚಾಚಾರ್ಯ ಬ್ಯಾಂಕ್‌ಗೆ ಸಮಾಜದವರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಉತ್ತಮ ಸಹಕಾರ ನೀಡುತ್ತಾ ಬಂದಿರುವುದರಿಂದ ಬ್ಯಾಂಕ್ ಇಂದು ಉತ್ತಮ ಸ್ಥಿತಿಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಬ್ಯಾಂಕ್‌ನ ಬೆಳವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬ ಸದಸ್ಯರ ಸಹಕಾರ ಹಾಗೂ ಶ್ರಮ ಮಹತ್ವದ್ದಾಗಿದೆ ಎಂದು ಸಮಾಜದ ಜಂಗಮ ಸಮಾಜದ ಗೌರವಾಧ್ಯಕ್ಷರು ಹಾಗೂ ಚಬನೂರ ಶ್ರೀ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿ ಶ್ರೀ ರಾಮಲಿಂಗಯ್ಯ ಮಹಾ ಸ್ವಾಮಿಗಳು ಹೇಳಿದರು.
ಗುರುವಾರರಂದು ಪಟ್ಟಣದ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿ,ದ ೨೬ನೇ ವಾರ್ಷದ ವಾರ್ಷಿಕ ಸರ್ವ ಸಾಧಾರಣಾ ಸಭೆಯನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಬ್ಯಾಂಕ್ ಸುಮಾರು ೨೬ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವು ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಮಾಜದ ಮುಖಂಡರು ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿ ಬ್ಯಾಂಕ್‌ನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರತಿಯೊಬ್ಬರ ಪರಿಶ್ರಮ ಮತ್ತು ಸಮಾಜದ ಸದಸ್ಯರ ವಿಶ್ವಾಸವೇ ಬ್ಯಾಂಕ್‌ನ ಇಂದಿನ ಪ್ರಗತಿಗೆ ಪ್ರಮುಖ ಕಾರಣವಾಗಿದೆ ಪ್ರಸ್ತುತ ಅಧ್ಯಕ್ಷ ಮುತ್ತು ಜಾಗೀರದಾರ್ ಮುತ್ತು ಅವರ ನೇತೃತ್ವದಲ್ಲಿ ಬ್ಯಾಂಕ್ ಉತ್ತಮವಾಗಿ ಹಾಗೂ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಸಾಲಿನಲ್ಲಿ ೮೨ ಲಕ್ಷ ರೂ.ಗೂ ಅಧಿಕ ಲಾಭಾಂಶದೊಂದಿಗೆ ಮುನ್ನಡೆದಿದೆ ಬ್ಯಾಂಕ್‌ನ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸುವುದರ ಜೊತೆಗೆ ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಇಂತಹ ಕಾರ್ಯಗಳಿಗೆ ಸಮಾಜದವರು ಸದಾ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದ ರಾಮಲಿಂಗಯ್ಯ ಶ್ರೀಗಳು ವಿಜಯಪುರ ಜಿಲ್ಲೆಯಲ್ಲಿ ತನ್ನದೇ ಆದ ಇತಿಹಾಸ ಮತ್ತು ಗೌರವ ಹೊಂದಿರುವ ಪಂಚಾಚಾರ್ಯ ಬ್ಯಾಂಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಬೇಕಿದೆ. ಮುಂದಿನ ದಿನಗಳಲ್ಲಿಯೂ ಬ್ಯಾಂಕ್ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿಕೊಂಡು ಸಮಾಜದ ಹೆಚ್ಚಿನ ಜನರಿಗೆ ಆರ್ಥಿಕ ಸೇವೆ ಒದಗಿಸುವಂತಾಗಲಿ. ಬ್ಯಾಂಕ್‌ನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಪಂಚಾಚಾರ್ಯರ ಕೃಪೆ ದೊರೆಯಲಿ ಎಂದು ಅವರು ಆಶಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಅವರು ಮಾತನಾಡಿ, ಯಾರದ್ದೇ ಮಾತು-ಹೇಳಿಕೆಗಳಿಗೆ ಕಿವಿಗೊಡದೆ, ಸಮಾಜದವರು ಕಷ್ಟಪಟ್ಟು ಬ್ಯಾಂಕ್‌ನ ಶೇರುಗಳನ್ನು ಪಡೆದು ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ನಮ್ಮ ಸಮಾಜದಲ್ಲಿ ಯಾವುದೇ ಬಡ ಜಂಗಮರು ಸಂಕಷ್ಟದಲ್ಲಿದ್ದರೂ ಅವರ ನೆರವಿಗೆ ಧಾವಿಸುವ ಮನೋಭಾವವಿದೆ. ಇದೇ ಒಗ್ಗಟ್ಟು ಮುಂದುವರಿಸಿಕೊಂಡು ಎಲ್ಲರೂ ಒಂದಾಗಿ ಮುನ್ನಡೆಯಬೇಕು ಎಂದು ಹೇಳಿದ ಅವರು ಬ್ಯಾಂಕ್‌ನ ಅಭಿವೃದ್ಧಿ ಎಂದರೆ ಅದು ಕೇವಲ ಆಡಳಿತ ಮಂಡಳಿಯ ಜವಾಬ್ದಾರಿ ಮಾತ್ರವಲ್ಲ. ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ಹಾಗೂ ಪ್ರತಿಯೊಬ್ಬ ಸದಸ್ಯರ ಸಹಕಾರದಿಂದ ಮಾತ್ರ ಸಂಸ್ಥೆ ಬಲಿಷ್ಠವಾಗಲು ಸಾಧ್ಯ. ಆದ್ದರಿಂದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಹಿತ ಮತ್ತು ಬ್ಯಾಂಕ್‌ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕೆಂದರು.
ಇನ್ನೋರ್ವ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿ,ದ ಸಿಂಧಗಿ ಶಾಖಾ ಸಲಹಾ ಸಮಿತಿ ಸದಸ್ಯ ಶಂಕರಯ್ಯ ಬಂದಾಳಮಠ ಅವರು ಮಾತನಾಡಿ, ಪಂಚಾಚಾರ್ಯ ಬ್ಯಾಂಕ್‌ನ ಸಿಂದಗಿಯಲ್ಲಿ ಬ್ಯಾಂಕ್ ಶಾಖೆ ಆರಂಭಿಸಲು ರಾಮಲಿಂಗಯ್ಯ ಸ್ವಾಮಿಗಳು ಸಾಕಷ್ಟು ಶ್ರಮಿಸಿದ್ದಾರೆ. ಅವರ ಸಲಹೆಯಂತೆ ಸಮಿತಿ ರಚಿಸಿ, ಅವರ ಸಮ್ಮುಖದಲ್ಲಿ ಬ್ಯಾಂಕ್‌ನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಮುತ್ತುರಾಜ ಜಾಹಾಗೀರದಾರ ಅವರು ವಹಿಸಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ವರದಿ ವಾಚಿಸಿದರು. ಶಿವಕುಮಾರ ಹಿರೇಮಠ ವೇದಗೋಷ್ಠಿ ನಡೆಸಿಕೊಟ್ಟರು.
ಇದೇ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಮಯದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ನಾಗಭೂಷಣ ಡೋಣೂರಮಠ, ಸಂಸ್ಥಾಪಕ ನಿರ್ದೇಶಕ ಕುಮಾರಸ್ವಾಮಿ ಮಠ, ಬಸಯ್ಯ ಹಿರೇಮಠ, ಸಂಗಯ್ಯ ಕೊಡಗಾನೂರ, ನಿರ್ದೇಶಕರಾದ ಈರಯ್ಯ ಹಿರೇಮಠ, ಚನ್ನಯ್ಯ ಹಿರೇಮಠ, ಈರಯ್ಯ ಹಿರೇಮಠ, ಪಂಚಾಕ್ಷರಿ ಹಿರೇಮಠ, ಮಲ್ಲಯ್ಯ ಸಾಲಿಮಠ, ಶ್ರೀಮತಿ ವಿದ್ಯಾ ಮಹಾಂತೇಶ ಮಠ, ರಾಜೇಶ್ವರ ಮಲ್ಲಯ್ಯ ವಿಭೂತಿಮಠ, ಸಮಾಜದ ತಾಲೂಕಾಧ್ಯಕ್ಷ ಶರಣಯ್ಯ ಹಿರೇಮಠ, ಮೊದಲಾದವರು ಉಪಸ್ಥಿತರಿದ್ದರು. ರಾಜಶೇಖರಯ್ಯ ಹಿರೇಮಠ ನಿರೂಪಿಸಿದರು. ಡಾ.ಸೋಮಶೇಖರಯ್ಯ ಹಿರೇಮಠ ವಂದಿಸಿದರು.